ಹದಿನಾರನೆಯ ಶತಮಾನದ ಪ್ರಾರಂಭದಲ್ಲಿ ಸ್ಪೇನಿಗರು ದಕ್ಷಿಣ ಅಮೆರಿಕಾದ ಗ್ವಾತೆಮಾಲವನ್ನು ಆಕ್ರಮಿಸಿಕೊಂಡ ಮೇಲೆ ಅಲ್ಲಿಯ ಮೂಲ ನಿವಾಸಿಗಳಾದ ಮಾಯಾ ಜನಾಂಗದವರನ್ನು ಹೊಸಕಿ ಹಾಕಲು ಇನ್ನಿಲ್ಲದಂತೆ ಪ್ರಯತ್ನಿಸಿದರು. ನಗರಗಳನ್ನು ಸುಟ್ಟು, ಸಮುದಾಯಗಳನ್ನೇ ಇಲ್ಲವಾಗಿಸಿ, ಐವತ್ತು ವರ್ಷಗಳಲ್ಲಿ ಸುಮಾರು ಎರಡೂವರೆ ಮಿಲಿಯನ್ ಮೂಲನಿವಾಸಿಗಳನ್ನು ಸಾಯಿಸಿದರು. ಅಂದಿನಿಂದಲೂ ಮಾಯಾ ಜನಾಂಗದವರು ಅನೇಕ ಘೋರ ಅತ್ಯಾಚಾರಗಳಿಗೆ ತುತ್ತಾಗಿದ್ದಾರೆ. ನಿರ್ನಾಮದಷ್ಟೇ ಹೇಯವಾದ ಗುಲಾಮಗಿರಿಯ ಭಾರದಡಿ ನಲುಗಿದ್ದಾರೆ. ಹತ್ತೊಂಬತ್ತನೆಯ ಶತಮಾನದ ಪ್ರಾರಂಭದಲ್ಲಿ ಸ್ಪೇನಿನ ಆಳಿಕೆಯಿಂದ ಮುಕ್ತಿ ಹೊಂದಿದರೂ ಸಹ ಮಾಯಾ ಜನಾಂಗದವರ ಸ್ಥಿತಿಯೇನೂ ಬದಲಾಯಿಸಿಲ್ಲ. ಇಪ್ಪತ್ತನೆಯ ಶತಮಾನದ ಉದಾರವಾದಿ ಆಳ್ವಿಕೆಗಳೂ ಸಹ ಮಾಯನ್ನರನ್ನು ನಿರ್ಲಕ್ಷಿಸಿವೆ. ಎಲ್ಲ ಅನ್ಯಾಯಗಳನ್ನು ಪ್ರಚಂಡ ತಾಳ್ಮೆಯಿಂದ ಈ ಜನ ಸಹಿಸಿದ್ದಾರೆ. ಇಪ್ಪತ್ತನೆಯ ಶತಮಾನದ ಅರವತ್ತರ ದಶಕದಲ್ಲಿ ಆಧುನಿಕತೆಯ ಗಾಳಿ ಮಾಯಾ ಸಮುದಾಯಗಳಲ್ಲಿ ಸ್ವಲ್ಪ ಮಟ್ಟಿಗೆ ಬೀಸಲಾರಂಭಿಸಿದ್ದು ಬದಲಾವಣೆಯ ಭರವಸೆಯನ್ನು ಮೂಡಿಸಿತ್ತು. ರಾಜಕೀಯವಾಗಿ ಈ ಮೂಲನಿವಾಸಿಗಳು ಸಂಘಟಿತರಾಗುವ ಅವಕಾಶವನ್ನು ಒದಗಿಸಿತ್ತು. ಆದರೆ ಗ್ವಾತೆಮಾಲದ ಸರ್ವಾಧಿಕಾರಿ ಮಿಲಿಟರಿ ಸರಕಾರ ಗೆರಿಲ್ಲಾ ಹೋರಾಟಗಾರರ ಹುಟ್ಟಡಗಿಸುವ ಪ್ರಯತ್ನದಲ್ಲಿ ತೊಡಗಿಸಿಕೊಂಡಿತು. ಯುನೈಟೆಡ್ ನೇಶನ್ಸ್ ಈ ಗೆರಿಲ್ಲಾ ಹೋರಾಟದ ಬಗ್ಗೆ ಮಾಹಿತಿಯನ್ನು ನೀಡುವ ಹೊತ್ತಿಗೇ ಗ್ವಾತೆಮಾಲದ ಸೈನ್ಯ ಸುಮಾರು ೪೫೦ ರಷ್ಟು ಮಾಯನ್ ಹಳ್ಳಿಗಳನ್ನು ಧ್ವಂಸ ಮಾಡಿ, ನೂರು ಸಾವಿರ ಜನರನ್ನು ಕೊಂದು, ಮಿಲಿಯನ್‌ಗಟ್ಟಲೆ ಜನರನ್ನು ನಿರಾಶ್ರಿತರನ್ನಾಗಿಸಿತ್ತು. ರಿಗೊಬೆರ್ತಾ ಮೆಂಚು ಪಕ್ಕದ ಮೆಕ್ಸಿಕೋಗೆ ಪಲಾಯನ ಮಾಡಿ ಬದುಕುಳಿದಿದ್ದಳು. ಪ್ರಚಾರ ಸಭೆಯೊಂದರಲ್ಲಿ ಆಕೆ ತನ್ನ ಜನಾಂಗದವರ ಮೇಲೆ ಆಗುತ್ತಿದ್ದ ಘೋರ ಅನ್ಯಾಯದ ಬಗ್ಗೆ ಹೇಳಿದಾಗ ಅಲ್ಲಿದ್ದ ಜನ ಇದಕ್ಕೆ ಪರಿಹಾರವಿದೆಯೆ ಎಂದು ಅಚ್ಚರಿಪಟ್ಟಿದ್ದರು.
ರಿಗೊಬೆರ್ತಾಳ ಹೆಸರು ಯಾರಿಗೂ ಗೊತ್ತಿರಲಿಲ್ಲ. ಬುಡಮಟ್ಟದ ಮಾಯನ್ ಕಾರ್ಯಕರ್ತೆಯರಲ್ಲಿ ಒಬ್ಬಳಾಗಿದ್ದಳು ಅಷ್ಟೇ. ಸ್ಪಾನಿಶ್ ರಾಯಭಾರಿ ಕಚೇರಿಯಲ್ಲಿ ಪ್ರತಿಭಟನೆ ಪ್ರದರ್ಶನ ನಡೆಸಲು ಹೋಗಿದ್ದವರಲ್ಲಿ ಅವಳ ಅಪ್ಪ ವಿಸೆಂತ್ ಮೆಂಚು ಒಬ್ಬ. ಮಿಲಿಟರಿ ಸರಕಾರ, ಅದರೊಳಗೆ ಕೆಲಸ ಮಾಡುತ್ತಿದ್ದವರು, ಕೆಲಸದ ಮೇಲೆ ಬಂದಿದ್ದವರು ಎಲ್ಲರನ್ನೂ ಸೇರಿಸಿ ಜೀವಂತ ದಹನ ಮಾಡಿತ್ತು. ಎಂಬತ್ತರ ದಶಕದ ಪ್ರಾರಂಭದಲ್ಲಿಯೇ ರೇಗನ್ ಸರಕಾರ ಗೆರಿಲ್ಲಾಗಳು ಕಮ್ಯೂನಿಸ್ಟರು ಎಂಬ ಆಪಾದನೆಯನ್ನು ಹೊರಿಸಿ, ಅವರನ್ನು ಹೊಸಕಿ ಹಾಕಲು ಮಿಲಿಟರಿ ಸರಕಾರಕ್ಕೆ ಸಹಾಯವನ್ನೂ ಒದಗಿಸಿತ್ತು.
ರಿಗೊಬೆರ್ತಾ ಹೊರಗಿನ ಪ್ರಪಂಚದ ಗಮನ ಸೆಳೆದಿದ್ದು ತನ್ನ ಮಾತಿನ ಶಕ್ತಿಯಿಂದ. ಫ್ರಾನ್ಸ್‌ನಲ್ಲಿದ್ದ ಮಾನವಶಾಸ್ತ್ರಜ್ಞೆ ಎಲಿಜಬೆತ್ ಬುರ್ಗೋಸ್ ೧೯೮೩ ರಲ್ಲಿ ಇಪ್ಪತ್ನಾಲ್ಕು ವರ್ಷದ ರಿಗೊಬೆರ್ತಾಳ ಸಂದರ್ಶನವನ್ನು ಮಾಡಿದಾಗ ಅದು ಸಂದರ್ಶನವಾಗಷ್ಟೇ ಉಳಿಯಲಿಲ್ಲ. ವಿಸ್ತೃತ ಕಥನವಾಯಿತು. ರಿಗೊಬೆರ್ತಾ ತಾನು ಕಂಡದ್ದು, ಅನುಭವಿಸಿದ್ದು ಎಲ್ಲವನ್ನು ಹೇಳುತ್ತಾ ಹೋದಳು. ಅದು ವೈಯುಕ್ತಿಕ ಕಥನವಾಗಿರಲಿಲ್ಲ. ಇಡೀ ಜನಾಂಗದ ಸ್ಮೃತಿಯಾಗಿತ್ತು. ಸುಮಾರು ಇಪ್ಪತ್ತು ಗಂಟೆಗಳ ಕಾಲ ಅವಳು ಮಾತನಾಡಿದ್ದನ್ನು ಮುದ್ರಿಸಿಕೊಂಡು, ಪುಸ್ತಕ ರೂಪಕ್ಕೆ ಇಳಿಸಿದಾಗ, ಅದು ಸಾಕ್ಷಿ ಹೇಳುವ ಧ್ವನಿಯನ್ನು ಹೊತ್ತು ಅಂತರಾಷ್ಟ್ರೀಯ ಓದುಗರಿಗೆ ತಲುಪಿತ್ತು. "ನಾನು, ರಿಗೊಬೆರ್ತಾ ಮೆಂಚು: ಗ್ವಾತೆಮಾಲದ ಮೂಲನಿವಾಸಿ ಇಂಡಿಯನ್ ಹೆಣ್ಣು" (I, Rigoberta Menchu: An Indian Woman in Guatemala) ಅಂತರಾಷ್ಟ್ರೀಯ ಸಮುದಾಯವನ್ನು ಬೆಚ್ಚಿ ಬೀಳಿಸಿ ಇತಿಹಾಸವನ್ನು ಸೃಷ್ಟಿಸಿದ್ದಂತೂ ನಿಜ. ರಿಗೊಬೆರ್ತಾ ಮರಳಿ ಗ್ವಾತೆಮಾಲಕ್ಕೆ ಹೋಗಿದ್ದು, ಸರಕಾರ ಅವಳನ್ನು ಬಂಧಿಸಿದ್ದು, ಗ್ವಾತೆಮಾಲದ ಮತ್ತು ಹೊರಗಿನ ಸುದ್ದಿ ಮಾಧ್ಯಮಗಳಲ್ಲಿ ರಿಗೊಬೆರ್ತಾ ಪರಿಚಿತವಾದದ್ದು, ಪ್ರಚಂಡ ಜನಬೆಂಬಲವನ್ನು ಗಳಿಸಿಕೊಂಡದ್ದು, ಅವಳ ಶಾಂತಿಯುತ ಹೋರಾಟಕ್ಕೆ ೧೯೯೨ ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ದೊರಕಿದ್ದು, ಗ್ವಾತೆಮಾಲ ಸರಕಾರ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲೇ ಬೇಕಾದ ಪರಿಸ್ಥಿತಿ ಒದಗಿದ್ದು, ಈಗ ಇತಿಹಾಸವಾಗಿದೆ. ಜನಾಂಗೀಯ ಹಿಂಸೆಯನ್ನು ಪ್ರಶ್ನಿಸಿ ತನ್ನ ಮಾಯನ್ ಸಮುದಾಯದವರ ಹಕ್ಕುಗಳಿಗೆ ಹೋರಾಡಿದ ರಿಗೊಬೆರ್ತಾ ರಾಷ್ಟ್ರೀಯ ಪ್ರಜ್ಞೆಯ ಭಾಗವಾಗಿದ್ದಾಳೆ. ಅಂತರಾಷ್ಟ್ರೀಯ ವಲಯಗಳಲ್ಲಿ ಅಚ್ಚರಿ ಮೂಡಿಸಿದ ಕಥನವಾಗಿದ್ದಾಳೆ. ತನ್ನ ರಾಜಕೀಯ ಹೋರಾಟವನ್ನು ಬಿಡದೆ ಮುಂದುವರೆಸಿದ್ದಾಳೆ.
ರಿಗೊಬೆರ್ತಾಳ ಕಥನದ ನಂತರ ಬಂದ ಅಂತರಾಷ್ಟ್ರೀಯ ಮನ್ನಣೆ, ನೊಬೆಲ್ ಪುರಸ್ಕಾರ ಇತ್ಯಾದಿಗಳ ಜೊತೆಗೆ ವಿವಾದವೂ ಸೃಷ್ತಿಯಾಯಿತು. ರಿಗೊಬೆರ್ತಾ ಒಬ್ಬ ಗೆರಿಲ್ಲಾ ಹೋರಾಟಗಾರ್ತಿ, ಕಮ್ಯೂನಿಸ್ಟ್ ಎಂದೇ ಗುರುತಿಸುವ ಉತ್ತರ ಅಮೆರಿಕದ ಸರಕಾರಿ ಮತ್ತು ಸಾಂಸ್ಥಿಕ ಪ್ರಜ್ಞೆಯನ್ನು ಪ್ರತಿನಿಧಿಸುವ ಒಬ್ಬ ತಲೆಮಾಸಿದ ಪತ್ರಕರ್ತನೊಬ್ಬನಿದ್ದ. ತಾನು ಒಬ್ಬ ಮಾನವಶಾಸ್ತ್ರಜ್ಞನೆಂದು ಹೇಳಿಕೊಳ್ಳುವ ಡೇವಿಡ್ ಸ್ಟಾಲ್ ಎಂಬಾತ ತಾನು ಗ್ವಾತೆಮಾಲಕ್ಕೆ ಹೋಗಿ, ಹತ್ತು ವರ್ಷ ಸಂಶೋಧನೆ ಮಾಡಿದ್ದೇನೆಂದು ಹೇಳಿಕೊಳ್ಳುತ್ತಾ, ರಿಗೊಬೆರ್ತಾ ಹೇಳಿಕೆಯಲ್ಲಿ ಹಲವಾರು ಅಸತ್ಯಗಳಿವೆ ಎಂದು ಸಾರುವ ಲೇಖನವೊಂದನ್ನು ಪ್ರಕಟಿಸಿದ. ಅವನಿಗೆ ಸಾಂಸ್ಥಿಕ ಕುಮ್ಮಕ್ಕಿತ್ತು ಎನ್ನುವುದನ್ನು ಈ ವಿವಾದಕ್ಕೆ ಸಿಕ್ಕ ಪ್ರಚಾರವೇ ಹೇಳುತ್ತದೆ. ಇರಲಿ, ಅವನ ಪ್ರಕಾರ, ರಿಗೊಬೆರ್ತಾಳ ತಮ್ಮನನ್ನು ಗ್ವಾತೆಮಾಲಾದ ಸೈನ್ಯ ಚಿತ್ರಹಿಂಸೆಗೊಳಪಡಿಸಿ ಸಾರ್ವಜನಿಕವಾಗಿ ಸುಟ್ಟಾಗ ರಿಗೊಬೆರ್ತಾಳ ಕುಟುಂಬ ಅಲ್ಲಿರಲೇ ಇಲ್ಲ. ರಿಗೊಬೆರ್ತಾ ಇದ್ದೇವೆಂದು ಹೇಳಿಕೊಂಡಿದ್ದಾಳೆ. ಇದು, ಅವನ ಪ್ರಕಾರ ಅವಳು ಹೇಳಿರುವ ಅಸತ್ಯಗಳಲ್ಲಿ ಒಂದು. ಇಷ್ಟಕ್ಕೂ ಅವಳು ಹೇಳಿದ್ದು ಸುಳ್ಳು ಎಂದು ಹೇಗೆ ಹೇಳಬಲ್ಲ? ಅವನು ತುಂಬ ಜನರನ್ನು ಸಂದರ್ಶಿಸಿದನಂತೆ. ಅಂತಹ ಘಟನೆ ನಡೆದ ನೆನಪಿಲ್ಲ ಎಂದರಂತೆ. ಅವರೆಲ್ಲ ಯಾರು? ಅವರ ಹಿನ್ನೆಲೆಯೇನು? ಅವರು ಅವನಿಗೆ ’ಸತ್ಯವನ್ನಲ್ಲದೇ ಬೇರೆ ಇನ್ನೇನೂ’ ಹೇಳುವುದಿಲ್ಲ’ ಎಂದು ಪ್ರತಿಜ್ಞೆ ಮಾಡಿದ್ದರೆ?... ಇತ್ಯಾದಿ ಪ್ರಶ್ನೆಗಳು ಅಪ್ರಸ್ತುತ ಬಿಡಿ. ಉತ್ತರ ಅಮೆರಿಕದ ಸಮಾಜಶಾಸ್ತ್ರಜ್ಞನೊಬ್ಬ ಸುಳ್ಳು ಹೇಳಲು ಸಾಧ್ಯವೆ? ರಿಗೊಬೆರ್ತಾ ಹೇಳಿರಬಹುದು. ಅವನು? ಡೇವಿಡ್ ಸ್ಟಾಲ್‌ನ ಹೇಳಿಕೆಗಳನ್ನು ಪ್ರಶ್ನಿಸಿ ಜಗತ್ತಿನ ಹಲವಾರು ವಿದ್ವಾಂಸರು ಹಲವಾರು ವಾದಗಳನ್ನು ಮುಂದಿಟ್ಟರು. ಪಶ್ಚಿಮದ ಚಿಂತನೆಗಳನ್ನು ಪ್ರತಿನಿಧಿಸುವ ಪತ್ರಕರ್ತನೊಬ್ಬ ಸಾಮುದಾಯಿಕ ಸ್ಮೃತಿಯೆಂಬ ಪರಿಕಲ್ಪನೆಯನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯವೇ ಎಂಬ ಪ್ರಶ್ನೆಯನ್ನೂ ಒಡ್ಡಿದರು. ಆದರು ರಿಗೊಬೆರ್ತಾಳ ವಿರುದ್ಧ ವಾದ ಮಾಡಿದವರ ಸಂಖ್ಯೆಯೂ ಕಡಿಮೆಯಿರಲಿಲ್ಲ. ನೊಬೆಲ್ ಪ್ರಶಸ್ತಿಯನ್ನು ವಾಪಸ್ ಪಡೆಯಬೇಕೆಂಬ ಒತ್ತಾಯವೂ ಬಂತು. ಪ್ರಶಸ್ತಿ ಸಮಿತಿ ‘ಪ್ರಶಸ್ತಿ ನೀಡಿರುವುದು ಬದುಕಿನುದ್ದಕ್ಕೂ ಆಕೆ ಮಾಡಿದ ಶಾಂತಿಯುತ ಹೋರಾಟಕ್ಕೆ, ಪುಸ್ತಕಕ್ಕಲ್ಲ, ಆದ್ದರಿಂದ ಅದೊಂದು ಅರ್ಥಹೀನ ವಾದ’ ಎಂದು ತಳ್ಳಿ ಹಾಕಿತು.
ಈ ವಿವಾದ ಸೃಷ್ಟಿಯಾದದ್ದಾದರೂ ಯಾತಕ್ಕೆ? ರಿಗೊಬೆರ್ತಾಳಿಗೆ ಗೆರಿಲ್ಲಾ ಹೋರಾಟಗಾರರ ಸಂಪರ್ಕವಿತ್ತು ಎಂಬ ವಾದ ಅಮೆರಿಕಾದ ಕಣ್ಣು ಕೆಂಪಾದದ್ದಕ್ಕೆ ಒಂದು ಕಾರಣವಿರಬಹುದು. ಯಾವ ಸಮಾಜಶಾಸ್ತ್ರಜ್ಞನ ಹಂಗಿಲ್ಲದೇ, ತನ್ನದೇ ಧ್ವನಿಯಲ್ಲಿ ಧೈರ್ಯವಾಗಿ "ನಾನು, ರಿಗೊಬೆರ್ತಾ ಮೆಂಚು... ಇದು ನಾನು ಕಂಡಿದ್ದು, ಕೇಳಿದ್ದು, ಅನುಭವಿಸಿದ್ದು, ಇದು ಘೋರ ಅನ್ಯಾಯಕ್ಕೆ ಒಳಗಾಗಿರುವ ನನ್ನ ಸಮುದಾಯದ ಕತೆ..." ಎಂದು ಸಾಕ್ಷಿ ಹೇಳುವ ದನಿಯಲ್ಲಿ ಹೇಳಿದ್ದು ಉತ್ತರ ಅಮೆರಿಕದ ಸರಕಾರಿ ಮತ್ತು ಸಾಂಸ್ಥಿಕ ಪ್ರಜ್ಞೆಯನ್ನು ಇನ್ನಷ್ಟು ಕೆಣಕಿರಬೇಕು ಎನ್ನುವುದು ಹಲವಾರು ವಿದ್ವಾಂಸರ ನಿಲುವು.
***
ತಸ್ಲೀಮಾ ಬರೆದಿದ್ದರ ಮೇಲೆ ಅನಗತ್ಯ ವಿವಾದವನ್ನು ಸೃಷ್ತಿಸಿ, ನಂತರ ತಸ್ಲೀಮಾ ‘ಪ್ರಚಾರಪ್ರಿಯೆ’ ಎಂದು ಗೂಬೆ ಕೂರಿಸುವುದು ನಮ್ಮ ಕ್ಷುಲ್ಲಕ ರಾಜಕೀಯಕ್ಕೆ ಸಾಕ್ಷಿ. ತಸ್ಲೀಮಾರ ವಿಷಯದಲ್ಲಿ ನಡೆದಿರುವುದು ಮಾನವ ಹಕ್ಕುಗಳ ಉಲ್ಲಂಘನೆ ಎನ್ನುವುದನ್ನು ಒಪ್ಪಿಕೊಳ್ಳಲೂ ಆಗದಂತಹ ರಾಜಕೀಯ ಮತ್ತು ಸಾಂಸ್ಕೃತಿಕ ಹೇಡಿತನ ನಮ್ಮದು. ರಿಗೊಬೆರ್ತಾಳ ಮೇಲೂ ಇದೇ ರೀತಿಯ ಪ್ರಚಾರ ನಡೆದಿತ್ತು. ಸ್ವಲ್ಪ ಬೇರೆಯ ಸನ್ನಿವೇಶಗಳ ಸೆಳವಿಗೆ ಸಿಕ್ಕಿ ಆ ವಾದ ಬಲವಾಗಿ ಉಳಿಯಲಿಲ್ಲ. ಆದರೂ ರಿಗೊಬೆರ್ತಾಳ ಕಥನವನ್ನು ಓದಬೇಕೆಂದರೆ ಸ್ಟಾಲನ ವಾದವನ್ನೂ ಓದಬೇಕು ಎಂಬ ಅನಿವಾರ್ಯ ಒದಗಿರುವುದು ಕುತಂತ್ರದ ಇನ್ನೊಂದು ಮುಖವನ್ನೂ ಪರಿಚಯಿಸುತ್ತದೆ.
ರಿಗೊಬೆರ್ತಾಳ ಸಾಕ್ಷಿ ಕಥನದ ಒಂದು ಭಾಗವನ್ನು ಆರಿಸಿ ಈ ಸಂಚಿಕೆಗೆ ಅನುವಾದಿಸಲಾಗಿದೆ. ಇದು ವಿವಾದವನ್ನು ಹುಟ್ಟು ಹಾಕಿದ ಒಂದು ಭಾಗ. ಗ್ವಾತೆಮಾಲದ ಮಿಲಿಟರಿ ಸರಕಾರ ಅಂತಹ ಬರ್ಬರ ಕೃತ್ಯವನ್ನು ಎಸಗಲೇ ಇಲ್ಲ ಎಂದು ಸಾಧಿಸ ಹೊರಟ ಡೇವಿಡ್ ಸ್ಟಾಲ್ ಕಥನದ ಈ ಭಾಗವನ್ನು ಪ್ರಶ್ನಿಸಿದ್ದ. ಸಾಮುದಾಯಿಕ ಸ್ಮೃತಿಯನ್ನು ಉಲ್ಲೇಖಿಸುವ ಕಥನದ ರೀತಿಯ ಕಡೆಗೆ ಓದುಗರ ಗಮನವನ್ನು ಸೆಳೆಯುವ ಉದ್ದೇಶದಿಂದಲೂ ಈ ಭಾಗವನ್ನು ಆರಿಸಲಾಗಿದೆ.
ಡಾ. ಜಿ. ಎಸ್. ಅಮೂರ ತಾವು ಸಂಪಾದಿಸಿದ ‘ಅವಳ ಕಥೆಗಳು’ ಕೃತಿಗೆ ಬರೆದಿರುವ ವಿದ್ವತ್ಪೂರ್ಣ ಮುನ್ನುಡಿ, ರಾಜಲಕ್ಷ್ಮಿ ಎನ್. ರಾವ್ ಅವರ ಕಥೆ ‘ಇಲ್ಲ...ಇಲ್ಲ’, ಅರುಂಧತಿ ರಾಯ್ ಅವರ ಲೇಖನ, ಶಶಿಕಲಾ ಚಂದ್ರಶೇಖರ್ ಅವರ ಕಥೆ ’ಆಶ್ಲೀ’, ಜೊತೆಗೆ ಯು. ಆರ್. ಅನಂತಮೂರ್ತಿಯವರ ಮುನ್ನುಡಿ, ಸಧ್ಯದಲ್ಲಿ ಪ್ರಕಟವಾಗಲಿರುವ ಕುಂದೇರಾ ಕಾದಂಬರಿ ‘ಭರಿಸಲಾಗದ ಹಗುರತನದಲಿ’ ನಿಂದ ಆಯ್ದ ಭಾಗಗಳು, ‘ರಂಗಸರಣಿ’ ಯಲ್ಲಿ ಮಾಲತಿಶ್ರೀ ಅವರೊಂದಿಗಿನ ಸಂದರ್ಶನದ ಮುಂದಿನ ಭಾಗ, ವಿವಾದವೆಬ್ಬಿಸಿದ್ದ ಇಸ್ಮತ್ ಚುಗ್ತಾಯಿ ಅವರ ಕಥನ ‘ಕೌದಿ’ಯ ಜೊತೆಗೆ ಲೇಖಕಿಯ ವಿಸ್ತ್ರತ ಪರಿಚಯ, ಅದರೊಂದಿಗೆ ಈ ಕಥನವನ್ನು ಇತ್ತೀಚೆಗಷ್ಟೇ ರಂಗದ ಮೇಲೆ ಪ್ರಯೋಗಿಸಿದ ಭವಾನಿ ಪ್ರಕಾಶ್ ಅವರ ಚಿತ್ರಗಳು, ಇತ್ಯಾದಿ... ಪ್ರಸ್ತುತ ಸಂಚಿಕೆಯಲ್ಲಿ. ಅನಿಸಿಕೆಗಳಿಗೆ ಸ್ವಾಗತ.
-ಸುಕನ್ಯಾ ಕನಾರಳ್ಳಿ
ಏಪ್ರಿಲ್, ೨೦೦೮















