‘UɼÀw,’ §gÀºÀUÁwðAiÀÄgÀ PÀ£ÀßqÀ e – ªÀiÁ¹PÀ                                      dįÉÊ,  2007

 

 

ಸುನಂದಾ ಪ್ರಕಾಶ ಕಡಮೆ

 

ಜನನ ೧೯೬೭ ಉತ್ತರ ಕನ್ನಡದ ಅಲಗೇರಿ. ಪ್ರಾಥಮಿಕ ಹಾಗು ಪ್ರೌಢಶಿಕ್ಷಣ ಅಲಗೇರಿ ಹಾಗೂ ಭಾವಿಕೇರಿಯಲ್ಲಿ. ಹುಬ್ಬಳ್ಳಿಯ ಮಹಿಳಾ ಕಾಲೇಜಿನಲ್ಲಿ ಬಿ.ಕಾಂ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ.

 

ಮೂಲತಃ ಗೋಕರ್ಣ ಸನಿಹದ ಕಡಮೆಯವರಾದ ಪ್ರಕಾಶ್ರೊಂದಿಗೆ ಗೃಹಿಣಿಯಾಗಿ ಹುಬ್ಬಳ್ಳಿಯಲ್ಲಿ ವಾಸ. ಮಕ್ಕಳು ಕಾವ್ಯ ಮತ್ತು ನವ್ಯ. ೧೯೯೭ ರಿಂದ ಬರವಣಿಗೆ ಆರಂಭ. ಕಥೆ, ಕವನ, ಲಲಿತ ಪ್ರಬಂಧಗಳಲ್ಲಿ ಆಸಕ್ತಿ. ಸಧ್ಯ ಉದಯವಾಣಿ ಸಾಪ್ತಾಹಿಕ

ಸಂಪದದಲ್ಲಿ  ಅಂಕಣ ಪಿಸುಗುಡುವ ಬೆಟ್ಟಸಾಲು ಬರೆಯುತ್ತಿದ್ದಾರೆ.

 

ಪುಟ್ಟ ಪಾದದ ಗುರುತು (ಕಥಾ ಸಂಕಲನ)

(ಛಂದ ಪುಸ್ತಕ ಬಹುಮಾನ (೨೦೦೪) ಪಡೆದ ಕೃತಿ)

 

(ಮುನ್ನುಡಿ: ಜಯಂತ ಕಾಯ್ಕಿಣಿ)

 

ನಿತ್ಯದ ಸ್ಪೂರ್ತಿಯ ಬಿಡಾರ

 

ಸುನಂದಾರ ಸುಟಿಯಾದ ಕತೆಗಳು ರಭಸದಿಂದ ಹುಸಿದು ಹೋಗುತ್ತಿರುವ ಇಂದಿನ ನಮ್ಮ ಎಳೆ ಬಿಡಾರಗಳ ಸಾಂಸಾರಿಕ ಲಯವನ್ನು ಮತ್ತು ಅದನ್ನು ಪುಟ್ಟ ಸರಳ ಸಹಜ ದೈನಿಕದ ಎಳೆಗಳ ಮೂಲಕ ಮತ್ತೆ ಕಟ್ಟಲು ಯತ್ನಿಸುವ ಇಂದಿನ ಹೊಸ ತಾಯಿಯ ನಿತ್ಯದ ಸ್ಪೂರ್ತಿಯಲ್ಲು ಆಶ್ಚರ್ಯ ಹುಟ್ಟಿಸುವಂಥ ಪಕ್ವತೆಯಲ್ಲಿ ಮೃದುವಾಗಿ ಚಿತ್ರಿಸುತ್ತಿವೆ.

 

ಸೇಫ್ಟಿಪಿನ್ ಹಾಕಿದ ನೈಟಿ, ಕರಾಟೆ ಮೆಹಂದಿ ಕ್ಲಾಸು, ಮ್ಯಾಚಿಂಗ್ ಬ್ಲೌಸು, ಮಮ್ಮಿ ಡ್ಯಾಡಿ, ಪ್ಯಾರಾಚೂಟ್ ಎಣ್ಣೆ, ಗಂಡನ ಊಟದ ಡಬ್ಬಿ - ಗಳ ನಿತ್ಯ ದೈನಿಕ್ವನ್ನು ಯಾವುದೋ ಅಮೂರ್ತ ಸಖ್ಯದ ಹಂಬಲದಲ್ಲಿ ಮರೆಯಲು ಯತ್ನಿಸುವ ಹಳಹಳಿಕೆಯ ಹಳೆಯ ಜಾಡನ್ನು ತೊರೆದು, ಈ ದೈನಿಕವನ್ನೇ ತಿಳಿವಿನ ತನ್ಮಯತೆಯಲ್ಲಿ ಹಾಯುತ್ತಲೇ ದಾಟುವ ಆಳವಾದ ಮಮತೆಯಲ್ಲಿ ಈ ಕತೆಗಳು ಹುಟ್ಟಿವೆ.

 

ಆಟಿಗೆಯ ಪುಟ್ಟ ಕಿಚನ್ ಪ್ಯಾರಡೈಸ್ ಸೆಟ್ಟಿನಲ್ಲೇ ಅಡಗಿಕೊಂಡಿರುವ ಹೆಣ್ಣುಮಕ್ಕಳ ನಾಳೆಗಳು, ಮೀನು ತಿನ್ನದವರ ನಡುವೆ ವಾಸ ಮಾಡುವವರು ಕದ್ದು ಹಿಂಬಾಗಿಲಿಂದ ತಂದು ಮೀನು ತಿನ್ನುವ ಸಂಭ್ರಮ, ತನ್ನ ಬಾಲ್ಯದ ಆಡೊಂಬಲದಲ್ಲಿ ನೌಕಾನೆಲೆಯವರು ಕಬ್ಜ ಮಾಡಿಕೊಂಡು ನೆಟ್ಟಿರುವ ನೋ ಎಂಟ್ರಿ ಬೋರ್ಡು, ನಾಳೆಗಳನ್ನು ಉದ್ದೀಪಿಸುತ್ತಲೇ ಬಂದಿದ್ದ ಕಟ್ಟು ಹಾಕಿಸಿದ್ದ ಕ್ಯಾಲೆಂಡರ್ ಚಿತ್ರವೊಂದರ ಕಾಜಿನ ಜೊತೆ ಠಳ್ಳೆಂದು ಒಡೆದುಹೋದ ಒಂದು ಮೂಕಲೋಕ, ಸಣ್ಣ ಖೋಲಿಗೆ ಕಬ್ಬಿಣದ ಹೊಸ ಕಪಾಟೊಂದನ್ನು ತಂದಾಗಿನ ಹಿಗ್ಗಿನಲ್ಲೇ ಇರುವ ಸಣ್ಣ ಸಾಮಾಜಿಕ ಲಜ್ಜೆ - ಇಂಥ ಇಂದಿನ ಬಿಡಾರ ಸೂಕ್ಷ್ಮಗಳಲ್ಲೇ ಸುನಂದಾರ ಕಥನದ ಜೀವ ಇದೆ.

ಮುಚ್ಚಳ ಕಳೆದುಹೋದ ಪೌಡರು ಡಬ್ಬಿ ಕಿರೀಟ ಬಿದ್ದ ರಾಜನಂತೆ ಕಾಣುತ್ತಿತ್ತು, ಚೂರು ಚೂರು ಉಳಿದ ಸೋಪಿನ ತುಣುಕುಗಳನ್ನು ಒತ್ತಿ ಒತ್ತಿ ಉಂಡೆ ಕಟ್ಟಿ ಅದರಿಂದಲೇ ಸ್ನಾನ ಮಾಡಿದಳು - ಇಂಥ ತಾಜಾ ವಿವರಗಳಲ್ಲಿ ಖಾಲಿ ಟೂಥ್ಪೇಸ್ಟ್ ಟ್ಯೂಬಿನ ಕೊನೆ ಹನಿಯನ್ನೂ ಬಿಡದಂತೆ ಉಳಿಸುವ ತಾಯಿಯ ಹತಾಶ ಕೌಶಲದಿಂದ ಸುನಂದಾ ಮಾನವೀಯ ಸಂದರ್ಭವನ್ನು ಕಟ್ಟಿ ಕಾಣಿಸುತ್ತಾರೆ. ಮತ್ತು ಗೊತ್ತಿರುವ ಲೋಕದಿಂದ ಮೆಲ್ಲಗೆ ಗೊತ್ತಿರದ ಲೋಕದ ಅಂಚಿಗೂ ಸರಿಯುತ್ತಾರೆ. ಆಗ ಬಣ್ಣದ ಕೌದಿ ಕತೆಯಲ್ಲಿ ಬರುವಂಥ ಲಿಫ್ಟ್ ಅಚಾನಕ್ ಆಗಿ ಮೂಡಿಬಂದು, ಸ್ಥಿತಿ ಸಾಧ್ಯತೆಗಳ ನಡುವಿನ ಬಿಂದುವಿನಲ್ಲಿ ನಮ್ಮನ್ನು ನಿಲ್ಲಿಸಿಬಿಡುತ್ತದೆ. ಕಂದೀಲು ಕತೆಯಲ್ಲಿ ಹಠಾತ್ತನೆ ಬೆಡ್ ಶೀಟಿನ ಪ್ರಿಂಟಿನಲ್ಲಿದ್ದ ಹುಲಿ ಜೀವ ತಳೆದು ನಾಯಕಿಯನ್ನು ಬದುಕಿನ ಹೊಸ ಆಟಕ್ಕೆ ಕರೆಯುತ್ತದೆ.

 

ಆಳವಾದ ತಾಯ್ತನ ಮತ್ತು ಹದಿಹರೆಯದ ಕಣ್ಣಿನ ಫಳಫಳ ಚೈತನ್ಯ ಇವುಗಳ ಅಪರೂಪದ ಸಂಗಮದಲ್ಲಿ ಅಪಸ್ವರವಿಲ್ಲದೆ ಅರಳಿರುವ ಸುನಂದಾರ ಪ್ರಾಮಾಣಿಕ ಕತೆಗಳು ನಮ್ಮ ಬದುಕಿನ ಗುಣವನ್ನು ಆಪ್ತವಾಗಿ ಹೆಚ್ಚಿಸುತ್ತವೆ.

 

                                                                                                                                        -ಜಯಂತ ಕಾಯ್ಕಿಣಿ

 

 ಗುಬ್ಬಿ ಗೂಡು

 

ಕೇಶ್ವಾಪುರದ ಜಾಧವ ಬಿಲ್ಡಿಂಗಿನ ದತ್ತೂ ಮಾಮನ ಮನೆಯಿಂದ ಹೊರಬಿದ್ದ ಸಂದೀಪ, ಎಸ್ಕೆ ಕಾಂಪ್ಲೆಕ್ಸ್ ಬಳಿ ಸಿಬಿಟಿ ಬಸ್ಸು ಹತ್ತಿ, ಕೋರ್ಟಿನ ಸರ್ಕಲ್ಲಿನಲ್ಲಿಳಿದಾಗ ಆಗಲೇ ಬೆಳಗಿನ ಒಂಬತ್ತೂವರೆ. ಪುಷ್ಪಾ ಮಾಮಿ ಚಹ ಕುಡಿಯಲು ಕೂತಾಗ ನಮ್ಮ ಪ್ರೀತಿಯ ಮೊದಲ ಹುಟ್ಟುಹಬ್ಬಕ್ಕೆ ನಿನ್ನ ಅಪ್ಪ ತೆಗೆಸಿಕೊಟ್ಟದ್ದಿದು ಎಂದು ಇಡ್ಲಿಪಾತ್ರೆ ತೋರಿಸುತ್ತ ಅಕ್ಕರೆಯಿಂದ ಒಂದೆರಡು ಇಡ್ಲಿ ಹೆಚ್ಚೇ ಬಡಿಸಿದ್ದು ಬಸ್ಸು ಹತ್ತಿದ ಕೂಡಲೇ ತೂಕಡಿಕೆ ತಂದುಬಿಟ್ಟಿತ್ತು. ದುರ್ಗದ ಬೈಲಿನಲ್ಲಿ ಪ್ರೀತಿ ಫೈನಾನ್ಸ್ ನಡೆಸುತ್ತ ಸದಾ ಸಫಾರಿ ಡ್ರೆಸ್ಸನ್ನೇ ತೊಡುತ್ತಿದ್ದ ದತ್ತೂ ಮಾಮ ಆಫೀಸಿಗೆ ತೆರಳುತ್ತಿದ್ದಾಗ ಬಾಗಿಲಲ್ಲೇ ನಿಂತು ಗುರ್ತಿಸಿಕೊಟ್ಟ ಜಾನ್ಹವಿ ಅಕ್ಕನ ಮನೆಯ ವಿಳಾಸದ ಸ್ಕೆಚ್ಚು ತನ್ನ ನೀಲಿ ಅಂಗಿಯ ಕಿಸೆಯಲ್ಲಿದೆಯೋ ಎಂದೊಮ್ಮೆ ಸಂದೀಪ ಪರೀಕ್ಷಿಸಿಕೊಂಡ.

 

ರಮ್ಜಾನ್ ಹಬ್ಬದ ಪ್ರಯುಕ್ತ ಶಾಲೆ-ಕಾಲೇಜು-ಸರ್ಕಾರಿ ಕಛೇರಿಗಳಿಗೆ ರಜೆ ಇದ್ದುದರಿಂದ ರಸ್ತೆಯಲ್ಲಿ ಸಾರ್ವಜನಿಕರಿಗಿಂತ ಖಾಖಿ ಧರಿಸಿದ ಪೊಲೀಸರ ಸಂಖ್ಯೆಯೇ ಎದ್ದು ಕಾಣುತ್ತಿತ್ತು. ಆರೇಳು ರಸ್ತೆಗಳು ಸಂಗಮಿಸುವ ಆ ವೃತ್ತದಲ್ಲಿ ಕ್ಷಣಕ್ಷಣಕ್ಕೂ ಏರುತ್ತಿರುವ ಉದ್ವಿಗ್ನತೆ ಸಂದೀಪನಿಗೆ ಏನೆಂದೇ ತಿಳಿಯದಾಗಿತ್ತು. ತನ್ನ ಬಿಣಗಾ ಕಾರವಾರಗಳಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಬಿಂದಾಸಾಗಿ ತಿರುಗುವ ಸಂದೀಪ, ಇಲ್ಲಿ ದಿಕ್ಕೇ ತಪ್ಪಿದಂತೆ ನಿಂತ.

 

ಇಂದಿನ ರಜೆಯ ನೆವ ಮಾಡೀ ನಿನ್ನೆ ರಾತ್ರಿಯೇ ಹೊರಟು ಬಂದ ಆತ, ಅಪ್ಪನ ಮೌನ, ಅಮ್ಮನ ಆತಂಕ ಎಲ್ಲದಕ್ಕೂ ಒಂದು ಅಂಕದ ಪರದೆಯೆಳೆಯಲೆಂದೇ ಎರಡು ವರ್ಷದ ಮೇಲೆ ಮೊದಲ ಬಾರಿ ಅಕ್ಕನನ್ನು ನೋಡಲು ಕಾತರಗೊಂಡಿದ್ದ.

 

ಹಬ್ಬವೊಂದು ಹುಬ್ಬಳಿಯಲ್ಲಿ ಇಂಥ ಬಂದೋಬಸ್ತಿನಲ್ಲಿ ನಡೆಯುತ್ತದೆಂಬ ಕಲ್ಪನೆ ಸಹ ಅವನಿಗಿರಲಿಲ್ಲ. ನಾವು ಸರೀ ಇದ್ದರೆ ನಮಗೆಂಥ ಹೆದರಿಕೆ? ಎನ್ನುತ್ತ ಆಫೀಸಿಗೆ ಹೊರಟ ದತ್ತೂ ಮಾಮಾ, ಸಂದೀಪನಲ್ಲೂ ಧೈರ್ಯ ತುಂಬಿ ಕಳಿಸಿಬಿಟ್ಟಿದ್ದ. ಪಕ್ಕದಲ್ಲೇ ಕಂಡ ಶಿರಡಿ ಮಂದಿರದ ದೊಡ್ಡ ಬಾಗಿಲು ಮಾತ್ರ ಭಕ್ತರಿಗಾಗಿ ತೆರೆದುಕೊಂಡೇ ಇದೆ. ಬಣ್ಣದ ಹೂಮಾಲೆಗಳಿಂದ ಶಾಂತಚಿತ್ತನಾಗಿ ಕೂತೇ ಇರುವ ಸಾಯಿಬಾಬಾನ ಗುಲಾಬಿ ಹಸ್ತದಲ್ಲಿ ಎಂಥದೋ ಅಭಯವಿರುವುದನ್ನು ಅರಿತ ಸಂದೀಪ ತನ್ನ ಬಲಗೈ ಹಸ್ತವನ್ನು ಎದೆಗೊತ್ತಿಕೊಂಡು ನಿಂತ.

 

ಬದಿಯಲ್ಲೇ ಹಬ್ಬಿ ನಿಂತಿರುವ ನ್ಯಾಯಾಲಯ ಕಟ್ಟಡದ ಎತ್ತರೆತ್ತರ ಮೆಟ್ಟಿಲುಗಳು ಒಮ್ಮೆಲೇ ಕಾರವಾರದ ತನ್ನ ದಿವೇಕರ ಕಾಲೇಜಿನ ಮೆಟ್ಟಿಲುಗಳಂತೆಯೇ ಕಂಡುಬಿಟ್ಟವು. ವರ್ಷಕ್ಕೊಂದೇ ಬಾರಿ ಹುಬ್ಬಳ್ಳಿಗೆ ಬಂದು ಒಂದೆರಡು ದಿನಗಳಿದ್ದು ಊರಿಗೆ ವಾಪಸಾಗುವ ಸಂದೀಪನಿಗೆ ದತ್ತೂ ಮಾಮನ ಬಜಾಜ್ ಸ್ಕೂಟರಿನ ಹಿಂದೆ ಕೂತು ತಿರುಗಾಡಿದ್ದೇ ರಸ್ತೆಯಾಗಿತ್ತದು. ಆದರೂ ಇಂದು ಮಾತ್ರ ಗೊತ್ತಿದ್ದ ದಾರಿಗಳೇ ತನ್ನ ರಹಸ್ಯವನ್ನು ಬಿಟ್ಟುಕೊಡದೇ ಸತಾಯಿಸಿದವು. ವಿಚಿತ್ರ ದುಗುಡ ತುಂಬಿದ ದ್ವಾರಗಳು. ಅವನಿದ್ದ ಸ್ಥಳದಿಂದ ಬರಿ ನೂರೇ ಹೆಜ್ಜೆಗಳ ಅಂತರದಲ್ಲಿರುವ ಹಳೇ ಬಸ್ ನಿಲ್ದಾಣದ ದಾರಿಗಾಗಿ ಆತ ಕಣ್ಣಿನಿಂದಲೇ ಹುಡುಕಾಡುತ್ತ ನಿಂತ.

 

ಬಿಳೀ ಷರ್ಟೀನ ಟ್ರಾಫಿಕ್ ಪೊಲೀಸರ ಕತ್ತಿನ ದಾರಕ್ಕೆ ನೇತುಬಿದ್ದ ಸೀಟಿಯ ಸ್ವರ ಎಡಬಿಡದೇ ಕಿವಿ ಕೊರೆಯುತ್ತಿತ್ತು. ಸಣ್ಣವನಿದ್ದಾಗ ಇದೇ ಸೀಟಿಯ ನಿನಾದಕ್ಕೆ ಮಳ್ಳಾಗಿದ್ದ ಸಂದೀಪ, ಯಾರಾದರೂ ದೊಡ್ಡವನಾದ ಮೇಲೆ ಏನಾಗುತ್ತೀ? ಅಂತ ಕೇಳಿದರೆ ನಾನು ಟ್ರಾಫಿಕ್ ಪೊಲೀಸನಾಗ್ತೇನೆ ಎನ್ನುತ್ತ ಮೂಗಿನಲ್ಲಿಯ ಸಿಂಬಳವನ್ನು ಸೊರ್ ಅಂತ ಏರಿಸುತ್ತಿದ್ದನಂತೆ. ಈಗ ಅವೆಲ್ಲ ಸಂದೀಪನಿಗೆ ನೆನಪಿಲ್ಲ.

 

ಎದುರುಗಡೆಯೇ ಹಾಯ್ದು ಕಂಪ್ಯೂಟರ್ ಕ್ಲಾಸಿನಿಂದ ಹೊರ ಬಂದ ಹುಡುಗಿಯರ ಗುಂಪೊಂದು ಸೇಂಟಿನ ಘಮವನ್ನು ಗಾಳಿಯಲ್ಲಿ ಉಳಿಸಿ ಹೋದದ್ದಲ್ಲದೇ, ಅವರ ಚೂಡೀದಾರದ ಹೆಗಲಲ್ಲಿ ಮೋಹಕವಾಗಿ ತೊನೆದಾಡುತ್ತಿರುವ ನೆಟೆಡ್ ವ್ಹೇಲು ಇವನನ್ನು ನಯವಾಗಿ ಸವರಿಕೊಂಡೇ ಹಾರಿತ್ತು. ಯಾಕೋ ಥಟ್ಟನೆ ಸಂದೀಪನಿಗೆ ಪುಷ್ಪಾ ಮಾಮಿಯ ಹತ್ತಿರ ಇಡ್ಲಿ ಜತೆ ಸಾಂಬಾರು ಮಾಡಿದಾಗ ಚಟ್ನೀ ಬೇಕೆಂದು, ಚಟ್ನಿ ಮಾಡಿದರೆ ಸಾಂಬಾರು ಬೇಕೆಂದು ಹಠ ಮಾಡುತ್ತ ತನ್ನ ಎಸ್ಎಸ್ಎಲ್ಸಿ ಪರೀಕ್ಷೆಯನ್ನೇ ಐಎಸ್ನಂತೆ ಬಾಬ್ಕಟ್ ಕೂದಲನ್ನು ಬಾಚಿಕೊಳ್ಳಲೂ ಸಹ ಪುರುಸೊತ್ತಿಲ್ಲದೇ ಘನ-ಗಂಭೀರವಾಗಿ ಓದುತ್ತಿರುವ ಪ್ರೀತಿ ನೆನಪಾಗಿಬಿಟ್ಟಳು.

 

ಸಂದೀಪ ಒಮ್ಮೆ ಸಣ್ಣದಾಗಿ ಕೆಮ್ಮಿದಂತೆ ಮಾಡಿ ಎದುರು ಬಂದ ವ್ಯಕ್ತಿಯೊಬ್ಬನಿಗೆ ಇಲ್ಲಿ ಹಳೇ ಬಸ್ಸ್ಟ್ಯಾಂಡೀನ ದಾರೀ... ಎಂದು ಕೇಳುತ್ತಿದ್ದಂತೆ ತನ್ನದೇ ಆದ ಅವಸರದ ದಾರಿಯಲ್ಲಿದ್ದ ಆತ ಯಾವ ಬದಿ ಕೈ ತೋರಿದನೆಂದೇ ಇವನಿಗೂ ತಿಳಿಯಲಿಲ್ಲ. ಅಮ್ಮ ಕೊಟ್ತಿದ್ದ ಒಜ್ಜೆಯಾದ ಪ್ಲಾಸ್ಟಿಕ್ ಕವರನ್ನು ಬಲಗೈ ಬೆರಳು ಉರಿದಾಕ್ಷಣ ಎಡಗೈಗೆ ರವಾನಿಸುತ್ತ, ತಲೆ ಕೆರೆಯುತ್ತ, ಕತ್ತು ಸವರಿಕೊಳ್ಳುತ್ತ, ಕಿಸೆಯಲ್ಲಿ ಅಕ್ಕನ ಮನೆಯ ಸ್ಕೆಚ್ಚಿನ ಕಾಗದವನ್ನು ಹಿಡಿದು ಮತ್ತೂ ಅಲ್ಲೇ ನಿಂತುಳಿದ.

 

***

ಈ ಹೊತ್ತಿಗೆ ಕಾರವಾರದ ಬಿಣಗೆಯಲ್ಲಿ ನೀಟಾಗಿ ಪೈಲ್ ಮಾಡಿಟ್ಟ ಜಾನ್ಹವಿ ಅಕ್ಕನ ಮ್ಯಾಟ್ರಿಕ್ಕು ಪಿಯೂಸಿಗಳ ಅಂಕಪಟ್ಟಿಗಳನ್ನು ಕಾರಣವಿಲ್ಲದೇ ತೆಗೆದು ನೋಡಿ ಮುಚ್ಚಿಡುವ ಅಪ್ಪ, ಅವಳೇ ಸ್ವತಃ ನಿರ್ಮಿಸಿಕೊಂಡ ಮುದ್ದು ಬಾಳನ್ನು ನೋಡುವ ಕುತೂಹಲವಿದ್ದರೂ ಅಮ್ಮನ ಬಳಿ ಸೋಲದೇ ಮಗಳ ಸುದ್ದಿ ಬಂದಾಗೆಲ್ಲ ಮುಖ ಗಂಟು ಹಾಕಿ ಸಿಟ್ಟು ಮೆರೆಯುತ್ತ, ಕಾಲಲ್ಲಿ ಚಪ್ಪಲಿ ಮೆಟ್ಟದೇ ಅಂಗಡಿಗೆ ತೆರಳುವ ದಾರಿಯಲ್ಲಿರಬೇಕು.

 

ಎರಡು ವರ್ಷಗಳ ಹಿಂದೆ ದೀಪಾವಳಿಗೆ ಕೊಡಿಸಿದ ಮಗಳ ಹೊಸ ಗುಲಾಬಿ ಸೀರೆಯೊಂದನ್ನು ಕಪಾಟಿನಿಂದ ಹೊರತೆಗೆದು ಮೂಸಿ ನೋಡಿ ಒಳಗಿಡುತ್ತ ಅಕ್ಕನ ದಟ್ಟಕೂದಲ ದಪ್ಪ ಹೆಣಿಗೆಯನ್ನೇ ಮುಟ್ಟಿ ಮುಟ್ಟಿ ತನ್ನ ತೆಳ್ಳನೆಯ ಕೂದಲು ಬಾಚಿಕೊಳ್ಳುತ್ತ ಅಮ್ಮ ಕಿಟಕಿಯಲ್ಲಿ ಕಣ್ಣು ನೆಟ್ಟು ಕೂತಿರಬೇಕು.

 

ಬಿಣಗೆಯಲ್ಲಿ ಕಾಲೇಜು ದೂರವೆಂದು ಮ್ಯಾಟ್ರಿಕ್ಕಿಗೇ ನಿಂತು ಹೋಗಲಿರುವ ಅಕ್ಕನ ಓದಿಗಾಗಿ ನಾನಿರುವಾಗ ನಿಮಗ್ಯಾಕೆ ಚಿಂತೆ? ಎನ್ನುತ್ತ ನಾಲ್ಕೈದು ವರ್ಷಗಳ ಹಿಂದೆಯೇ ಹುಬ್ಬಳ್ಳಿಗೆ ಕರೆತಂದ ದತ್ತೂ ಮಾಮಾ ದುರ್ಗದ ಬೈಲಿನ ತನ್ನ ಸ್ವಂತದ ಫೈನಾನ್ಸ್ ಆಫೀಸಿನಲ್ಲಿ ಗಿರಾಕಿಗಳ ಜತೆ ಹಲ್ಲು ಗಿಂಜುತ್ತ ಲಾಭ-ಹಾನಿ-ಬಡ್ಡಿ ದರಗಳ ಲೆಕ್ಕ ಹಾಕುತ್ತ ಕಣ್ಣುಗಳಲ್ಲೇ ಎಲ್ಲರ ದಾರಿಗಳನ್ನೂ ಸೆರೆ ಹಿಡಿಯುತ್ತಿದ್ದಾನೆ.

 

ಜಾನ್ಹವಿಯ ನಯ-ನಾಜೂಕು ತನ್ನ ಮಗಳು ಪ್ರೀತಿಯೂ ಸ್ವಲ್ಪ ಕಲಿಯಲಿ ಎನ್ನುತ್ತ, ತನ್ನ ಮದುವೆಗೆ ಮುಂಚಿನ ಸಿಂಗಾರ್ ಮಷಿನ್ನಲ್ಲಿ ಕಟ-ಕಟ ರುದ್ರ ಭೀಕರ ಸದ್ದು ಮಾಡಿ ಪ್ರೀತಿಗೆ ಹೊಲಿದಂತೆಯೇ ಜಾನ್ಹವಿ ಅಕ್ಕನಿಗೂ ಡ್ರೆಸ್ಸು ಹೊಲಿದ ಪುಷ್ಪಾ ಮಾಮಿ ಈಗ ಸಿಂಕಿನಲ್ಲಿ ಇಡ್ಲೀ ಪಾತ್ರೆ ತೊಳೆಯುತ್ತಿರಬಹುದು.

 

***

ಇಲ್ಲಿ ಯಾವ ರಸ್ತೆ ಎಲ್ಲಿಗೆ ಮುಟ್ಟುತ್ತದೆಂದೇ ಸಂದೀಪನಿಗೆ ಬಗೆ ಹರಿಯಲಿಲ್ಲ. ಬಹಳ ಹೊತ್ತಿನಿಂದ ಸಂದೀಪನ ಚಲನವಲನಗಳನ್ನು ಸಂಶಯದ ಕಣ್ಣಿನಿಂದಲೇ ಸೆರೆ ಹಿಡಿಯುತ್ತಿದ್ದ ಪೇದೆಯೊಬ್ಬ ದುರುಗುಟ್ಟಿಕೊಂಡು ಹತ್ತಿರ ಬಂದ. ಅವನ ಕೈಯಲ್ಲಿಯ ಕಾಗದ ಕಸಿದು ತಿರುಗಿಸಿ- ತಿರುಗಿಸಿ ಪರಾಂಬರಿಸುತ್ತ ಅಲ್ಲಿದ್ದ ಕಮರೀಪೇಟೆ, ಹಳೇ ಹುಬ್ಬಳ್ಳಿ, ಬಾಣ ಹಾಗೂ ನಕ್ಷತ್ರ ಚಿನ್ಹೆಗಳನ್ನು ಕಂಡದ್ದೇ ಪೇದೆಯ ತಲೆ ಗಿರಿಗಿರಿ ತಿರುಗಿ ಬಿಟ್ಟಿತು. ಅತೀ ಸಮೀಪದಿಂದ ಕಾಣುತ್ತಿದ್ದ ಪೇದೆಯ ಕೈಯಲ್ಲಿಯ ಲಾಠಿಯ ಗಾತ್ರವೇ ಸಂದೀಪನ ಎದೆ ನಡುಕವನ್ನು ಹೆಚ್ಚಿಸುತ್ತಿತ್ತು.

 

***

ಒಂದು ದಿನ ಕಾಲೇಜಿಗೆ ಹೋದ ಅಕ್ಕ ಮರಳಿ ಮನೆಗೆ ಬರದೇ ಇದ್ದಾಗ ಕಂಗಾಲಾದ ಮಾಮಾ ಮಾಮಿ ರಾತ್ರೋರಾತ್ರಿ ನಡುಗುವ ಚಳಿಯಲ್ಲಿ ಊರಿಗೆ ಓಡಿ ಬಂದು ಅಕ್ಕ ಬರೆದು ತರಂಗ ಪತ್ರಿಕೆಯಲ್ಲಿಟ್ಟು ಹೋದ ಸಣ್ಣ ಚೀಟಿ ತೋರಿಸಿ ಅಪ್ಪ- ಅಮ್ಮನನ್ನು ಹಿಡಿದು ಅಳುತ್ತ ಕೂತಾಗ ಸಂದೀಪ ನಿದ್ದೆ ಹಾಗು ಎಚ್ಚರಗಳ ನಡುವಿದ್ದ. ಹುಡುಗ ಯಾರೆಂದು ಗೊತ್ತಿದ್ದರೆ ಕಂಪ್ಲೇಂಟು ಕೊಡೋಣ ಎಂದೆಲ್ಲ ಆವೇಶಗೊಂಡು ನಂತರ ವಿವೇಕ ಕಳಕೊಳ್ಳದ ಅಪ್ಪ ಹುಡುಕಿಸೋಣ, ನೀನು ಬೇಜಾರು ಮಾಡ್ಕೋಬೇಡಾ ಅಂತ ಮಾಮನನ್ನೇ ಸಮಾಧಾನ ಮಾಡಿದ್ದ.

 

***

ಸಂದೀಪನಿಗೆ ಈಗ ಎಂದೂ ನೋಡದ, ಅಕ್ಕನನ್ನು ಸೆರೆ ಹಿಡಿದ ಭಾವನ ಅಮೂರ್ತ ಪ್ರತಿಮೆ ಬಿಟ್ಟೂ ಬಿಡದೇ ಕಾಡತೊಡಗಿತು. ವಿಳಾಸದ ಚೀಟಿ ಪೊಲೀಸರ ಕೈಯಿಂದ ಕಸಿದಂತೆ ಎಳೆದವನೇ ಪ್ಯಾಂಟಿನ ಕಿಸೆಗೆ ತುರುಕಿ ಬಿಟ್ಟ. ಇವನನ್ನು ಮಾವನ ಮನೆಯಲ್ಲಿ ಕೂಡಿಸು, ನಮಾಜು ಮುಗಿದ ನಂತರ ವಿಚಾರಿಸಿಕೊಳ್ಳುವಾ ಎಂದು ಆಗಲೇ ಒಂದೆಡೆ ಸೇರಿದ ನಾಲ್ವರು ಪೋಲೀಸರು ಮಾತಾಡಿಕೊಂಡಿದ್ದನ್ನು ಸಂದೀಪ ಒಂದೂ ಅರ್ಥವಾಗದೇ ನೋಡಿದ. ಪೊಲೀಸರಿಗಿಂತ ಅವರ ಕೈಯಲ್ಲಿಯ ಲಾಠಿಯೇ ಮುಂದೆ ಮುಂದೆ ಬರಲಾರಂಭಿಸಿದ್ದ ಸಂದೀಪನಲ್ಲಿ ಆತಂಕ ಹುಟ್ಟಿಸಹತ್ತಿತು. ಜಾನ್ಹವಿ ಅಕ್ಕ... ದತ್ತೂ ಮಾಮಾ... ಪ್ರೀತಿ ಫೈನಾನ್ಸ್ ಎಂತೆಲ್ಲ ಒಂದಕ್ಕೊಂದು ಅರ್ಥವಾಗದ ಪದಗಳನ್ನು ಉಚ್ಚರಿಸುತ್ತ ಅಂಗಲಾಚಿದ ಇವನ ಗೊಣಗಾಟವನ್ನೆಲ್ಲ ಕೇಳಿಸಿಕೊಳ್ಳುವ ತಾಳ್ಮೆ ಅವರಿಗಿದ್ದಂತಿರಲಿಲ್ಲ.

 

ಪೇದೆಯೊಬ್ಬ ರಟ್ಟೆಗೆ ಕೈ ಹಾಕಿದೊಡನೆ ಸಂದೀಪ ಥರಗುಟ್ಟಿಹೋದ. ಏನಾಗುತ್ತಿದೆಯಿಲ್ಲಿ ಎಂದು ತಿಳಿಯುವ ಮೊದಲೇ ಅಲ್ಲಿಗೆ ಸಮೀಪದ ಈದ್ಗಾ ಮೈದಾನದ ಪಕ್ಕದಲ್ಲಿದ್ದ ಪೊಲೀಸ್ ಸ್ಟೇಷನ್ನಿನ ಜಿಡ್ಡುಗಟ್ಟಿದ ಬೆಂಚಿನ ಮೇಲೆ ಎಳೆತಂದು ಕೂಡಿಸಿದ ಪೇದೆ ಎದ್ದೆಯೆಂದರೆ ಏರೋಪ್ಲೇನು ಎಂದು ಗದರಿಸಿ ಹೊರಗೇನೋ ಗದ್ದಲ ಕೇಳಿತೆಂದು ಮಾಯವಾಗಿ ಬಿಟ್ಟ. ಸ್ಟೇಷನ್ನು ಒಂದು ನರಪಿಳ್ಳೆಯೂ ಇಲ್ಲದೆ ಖಾಲಿ ಸುರಿಯುತ್ತಿತ್ತು. ಕೂತಲ್ಲಿಂದ ಕೊಂಚ ಸರಿದಾಡಲೂ ಸಹ ಸಂದೀಪನಿಗೆ ಭಯವಾಯ್ತು. ಇಷ್ಟೊತ್ತಿಗಾಗಲೇ ಮಾಮಿ, ಜಾನ್ಹವಿ ಅಕ್ಕನಿಗೆ ಫೋನು ಮಾಡಿ ಬಿಟ್ಟಿದ್ದಾಳೋ ಏನೊ.

 

***

ನಮ್ಮ ದತ್ತೂಗೆ ಬುದ್ದಿ ಕಮ್ಮಿ. ಜಾತಿ ಪರಜಾತಿ ಎನ್ನದೇ ಡೈನಿಂಗ್ ಟೇಬಲ್ಲಿಗೇ ಕರೆದು ತಾನುಣ್ಣುವ ತಾಟಲ್ಲೇ ಊಟ ಹಾಕ್ತಾನೆ. ಅದಕ್ಕೇ ನನ್ನ ಮಗಳಿಗೆ ಜಾತಿ- ಗೀತಿಯ ಫರಕು ಗೊತ್ತಾಗಲಿಲ್ಲ ಎಂದೊಮ್ಮೆ ಅಮ್ಮ ದಾರುಣವಾಗಿ ಅಂದು ಬಿಟ್ಟಾಗ ಪುಷ್ಪಾ ಮಾಮಿಯೇ ಮಗಳು ಹೋದ ಸಂಕಟ ಏನೇನೋ ಹೇಳಸ್ತದೆ ಎಂದು ಗಂಡನನ್ನು ತಾನೇ ಸಮಾಧಾನ ಪಡಿಸಿದ್ದಳು. ಅಮ್ಮನ ಧೀರೋದಾತ್ತ ತಮ್ಮ ಈ ದತ್ತೂ ಮಾಮಾ. ಅವನ ಜತೆಗಿನ ಅಪ್ಪನ ಒಬ್ಬಳೇ ತಂಗಿ ಪುಷ್ಪಾ ಮಾಮಿಯ ಪ್ರೇಮ ಪ್ರಸಂಗ ಹದಿನೈದು ವರ್ಷಗಳಷ್ಟು ಹಳೆಯದು.

 

ದೊಡ್ಡ ಕಥೆ ಉಂಟದು ಎಂದು ನಕ್ಕು ಹೇಳುವ ಅಮ್ಮ ಯಾಕೋ ಫ್ಲ್ಯಾಶ್ಬ್ಯಾಕ್ಗೆ ಹೋಗುವ ಮನಸ್ಸಿಲ್ಲದಂತೆ ಕೂಡುತ್ತಾಳೆ.  ಪುಷ್ಪಾಮಾಮಿ ಮಾತ್ರ ಅಜ್ಜಿಯ ಆಸ್ಪತ್ರೆಯ ಖರ್ಚು ಹಾಗೂ ಅವಳ ಗುಳಿಗೆಗಳ ಬೆಲೆಯನ್ನು ಸರ್ವಥಾ ಯಾರ ಮುಂದೆಯೂ ಬಾಯ್ಬಿಡುವುದಿಲ್ಲವಂತೆ.

 

ತನ್ನ ಮಗಳು ಪ್ರೀತಿ ಹುಟ್ಟಿದಾಗ ಈ ಶಹರದ ಬದುಕಿನಲ್ಲಿ ತಾನು ಯಾವೊಂದು ವಿಷಯದಿಂದ ಅವಳನ್ನು ದೂರವಿಡಬೇಕೆಂದು ಕೊಂಡಿದ್ದೆನೊ ಅದೇ ಸಂಗತಿ ಈಗ ಅವಳ ಕಣ್ಣ ಮುಂದೆಯೇ ಘಟಿಸಿ ಹೋದ ಬಗ್ಗೆ ಮೊದಮೊದಲು ಪುಷ್ಪಾಮಾಮಿ ಬಹಳ ಸಂಕಟಪಟ್ಟಳಂತೆ. ಜಾನ್ಹವಿ ಅಕ್ಕನ ತರಂಗ ಪತ್ರಿಕೆಯಲ್ಲಿದ್ದ ಪ್ರೀತಿಯ ಪಟ್ಟಿಯಿಂದಲೇ ಹರಿದ ಛಿದ್ರ ಹಾಳೆಯ ಗೀಚು- ಗೀಚು ಅಕ್ಷರದ ಆ ಚೀಟಿ ಪುಷ್ಪಾಮಾಮಿಯನ್ನು ಬಹಳ ದಿನಗಳವರೆಗೆ ಕಾಡಿತ್ತು. ನಂತರ ಸಿದ್ಧಮಾದರಿಯಂತೆ ಪ್ರೀತಿಯ ಕಣ್ಣಿಗೆಲ್ಲಾದರೂ ಬಿದ್ದು ಬಿಟ್ಟೀತೆಂದು ಹೆದರಿ ಒಂದು ದಿನ ಹರಿದು ಹಾಕಿಬಿಟ್ಟಳಂತೆ. ಅನಂತರದಲ್ಲಿ ಕ್ರಮೇಣ ಈ ಓಡಿಹೋಗು ಎಂಬ ಶಬ್ದಕ್ಕಂಟಿದ ಮೈಲಿಗೆ ಮಾಯವಾಗಿ ಅದೊಂದು ಹಾಸ್ಯಮಯ ಪದದಮ್ತೆ ಪ್ರೀತಿಯ ಮುಂದೆಯೇ ದೊಡ್ಡವರೆಲ್ಲ ಉಚ್ಛರಿಸುವ ಮಟ್ಟಕ್ಕೆ ಏರಿದಾಗ ಪುಷ್ಪಾಮಾಮಿ ಒಂದು ರೀತಿಯ ಬಿಡುಗಡೆಯನ್ನೂ ಸಹ ಅನುಭವಿಸಿದಳು.

 

ಜಾನ್ಹವಿ ಅಕ್ಕ ಕಾಣೆಯಾದ ಐದನೇ ದಿನಕ್ಕೆ ಅಂಚೆಗೆ ಬಂದ ವಳ ಮದುವೆಯ ರಜಿಸ್ಟ್ರೇಷನ್ ಪತ್ರವೊಂದು ಎಲ್ಲರನ್ನೂ ದಂಗುಬಡಿಸಿತ್ತು. ಪಾಲಕರ ರುಜು ಇರುವೆಡೆಯಲ್ಲಿ ಯಾರದೋ ಹೆಸರನ್ನು ಓದುತ್ತ ಅಪ್ಪ ಮತ್ತು ದತ್ತೂ ಮಾಮಾ ಮಲಗುವ ಖೋಲಿಗೆ ಹೋಗಿ ಬಾಗಿಲು ಭದ್ರಪಡಿಸಿ ಒಬ್ಬರಿಗೊಬ್ಬರು ತಬ್ಬಿಕೊಂಡು ಅತ್ತುಬಿಟ್ಟರು. ಸುದ್ದಿ ಮುಟ್ಟಿ ಎಂಟು ದಿನ ರಜೆ ಗೀಚಿ ಓಡಿ ಬಂದ ಬೆಂಗಳೂರಿನ ಕಾಕಾ ಮಾತ್ರ ಇವಳು ಇಪ್ಪತ್ನಾಲ್ಕು ಕ್ಯಾರೆಟ್ ಚಿನ್ನ ಅಂತ ತಿಳಿದಿದ್ದೆ. ಅಣ್ಣನ ಹತ್ತಿರ ಇವಳ ಜಾತಕ ಕೊಡಿಸಬೇಕೆಂದು ಅಲ್ಲಿ ರಿಝರ್ವ್ ಬ್ಯಾಂಕಿನಲ್ಲಿರುವ ಹುಡುಗನ ದೋಸ್ತೀ ಮಾಡಿದ್ದೆ ಎಂದು ವರಲುತ್ತ ಕೂತ.

 

ಆದರೆ ಅಮ್ಮ, ಮಾಮಿ ಮತ್ತು ಕಾಕೂರೊಂದಿಗೆ ಅಡಿಗೆ ಖೋಲಿಯಲ್ಲಿ ದುಂಡು ಮೇಜಿನ ಪರಿಷತ್ತು ನಡೆಸಿ ಹುಡುಗನ ಜಾತಿ ಕಟ್ತಿಕೊಂಡು ನಮಗೇನು, ಅವನನ್ನು ಕರೆದು ತಂದು ನಮ್ಮ ಪದ್ದತಿಯಂತೆ ಒಂದು ಮುಂಜಿ ಮಾಡಿಸಿ ಬಿಡುವಾ ಎಂದೆಲ್ಲ ಠಳಾಯಿಸುತ್ತಿದ್ದಾಗ ಅಂಥ ಅವೇಳೆಯಲ್ಲೂ ಎಲ್ಲರೂ ಟೀವಿಯಲ್ಲಿ ಟೆನ್ನಿಸ್ ಕೃಷ್ಣನ ಜೋಕು ಕಂಡಂತೆ ಖೊಖ್ಖನೆ ನಕ್ಕುಬಿಟ್ಟರು. ನಂತರ ನಗುವನ್ನು ನಿಷೇಧಿಸಲಾಗಿದೆ ಎಂದು ಬೋರ್ಡು ಹಾಕಿಕೊಂಡವರಂತೆ ಓಡಾಡಿಕೊಂಡಿದ್ದರು. ಅಮ್ಮ ಮಾತ್ರ ಈಗಲು ಯಾರದಾದರೂ ಮದುವೆ- ಮುಂಜಿಗಳಲ್ಲಿ ಕಾಣದಂತೆ ಕಣ್ಣೀರೊರೆಸಿಕೊಳ್ಳುತ್ತ ಉಳಿಯುತ್ತಾಳೆ. ಈ ನಡುವೆ ದತ್ತೂ ಮಾಮನಿಗೆ ಹಾಳು ಟೆನ್ಶನ್ ಹೆಚ್ಚಾಗಿ ಬೀಪಿ ಬೇನೆಯೊಂದು ಅಂಟಿಕೊಂಡು ಮನೆಯ ವಾತಾವರಣ ಸದಾ ಸೆಕ್ಷನ್ ೧೪೪ ಜಾರಿಯಲ್ಲಿದ್ದಂತೆ ಇತ್ತಂತೆ. ಒಮ್ಮೆ ಅಪ್ಪ ಆ ಬಗ್ಗೆ ಕೇಳಿದಾಗ ಪುಷ್ಪಾಮಾಮಿ ಏನಣ್ಣಾ ಮಾಡ್ಲಿ, ಕೆಟ್ಟ ಕುಡುಕನೊಬ್ಬನ ಹೆಂಡತಿಗೆ ಇರಬೇಕಾದ ಮನಸ್ಥೈರ್ಯವೇ ಒಬ್ಬ ಬೀಪಿ ಪೇಷೆಂಟಿನ ಹೆಂಡತಿಗೂ ಇರಬೇಕಾಗ್ತದೆ ಎಂದು ನಕ್ಕುಬಿಟ್ಟಳಂತೆ.

 

ಇವೆಲ್ಲ ಕನಸಿನಂತೆ ನಡೆದು ಹೋಗಿ ಐದಾರು ತಿಂಗಳ ನಂತರ ಉಣಕಲ್ ಕೆರೆ ಉದ್ಯಾನದಲ್ಲಿ ಮೊದಲ ಬಾರಿ ಅಕ್ಕ ಹಾಗು ಮಾಮಿಯರ ಸಮ್ಮಿಲನವಾದಾಗ ಎಷ್ಟೋ ಹೊತ್ತು ಬರಿ ಕಣ್ಣಲ್ಲೇ ಒಬ್ಬರನ್ನೊಬ್ಬರು ತುಂಬಿಕೊಂಡು, ಕೊನೆಗೆ ಕರಗಿ ನೀರಾದ ಮನಸ್ಸಿನಿಂದ ಇಬ್ಬರ ನಡುವೆ ಟೆಲಿಫೋನ್ ನಂಬರುಗಳು ವಿನಿಮಯವಾಗಿತ್ತು. ಜಾನ್ಹವಿಯಕ್ಕ ಪಕ್ಕದ ಮನೆಯ ಸಾರಾ ಚಾಚಿಯ ನಂಬರು ಕೊಟ್ಟಳು. ಅಂದಿನಿಂದ ಹದಿನೈದು ದಿನಗಳಿಗೊಮ್ಮೆ ಸವಿಸ್ತಾರವಾದ ಮಾತುಕತೆ, ಅದೂ ದತ್ತೂಮಾಮ ಮನೆಯಲ್ಲಿರದಾಗ. ಪುಷ್ಪಾಮಾಮಿ ವಕ್ತಾರೆಯಂತೆ ಕಾರ್ಯ ನಿರ್ವಹಿಸತೊಡಗಿದ್ದು ಮೊದಲ ಬಾರಿ ತಿಳಿದಾಗ ದತ್ತೂ ಮಾಮ ನಿನ್ನದೆಲ್ಲ ಗೊತ್ತುಂಟು, ಅವಳು ರನ್ನಿಂಗಿಗೆ ರೆಡಿಯಾಗಿ ನಿಂತಾಗ ಅಂಪಾಯರ್ಗಿರಿ ಮಾಡಿ ಸೀಟಿ ಹೊಡೆದವಳೇ ನೀನು. ಈಗ ಚಮಚಾಗಿರಿ ಮಾಡ್ತೀ? ಅಂತೆಲ್ಲ ಸಿಡುಕಿಬಿಟ್ಟಿದ್ದನಂತೆ.

 

ಮನೆಗೊಂದು ಪುಟ್ಟ ಮೊಮ್ಮಗು ಬರುವ ಸಂಭ್ರಮದ ವಿಷಯ ತಿಳಿದಾಗ ಅಮ್ಮ, ಟ್ರಂಕಿನಲ್ಲಿಟ್ಟ ಬೆಳ್ಳಿ ನೀಲಾಂಜನ ಹೊರತೆಗೆದು ಕುಲದೇವಿಯ ಮುಂದೆ ತುಪ್ಪದ ದೀಪ ಹಚ್ಚಿದ್ದಳು. ಅಪ್ಪ ಗಮನಿಸಿದರೂ ಏನೂ ತಿಳಿಯದವನಂತೆ ಸುಮ್ಮನಿದ್ದ. ಹಬ್ಬ ಹರಿದಿನ ಅಜ್ಜಂದಿರ ಶ್ರಾದ್ಧಗಳಲ್ಲಿ ಒಂದಾಗುವ ಅಮ್ಮ ಮತ್ತು ಮಾಮಿ ಗುಟ್ಟಾಗಿ ಅಡುಗೆ ಒಲೆಯ ಮುಂದೊ, ಬಾವಿಕಟ್ಟೆಯ ನೀರು ಜಗ್ಗುತ್ತಲೋ ಮನಸ್ಸು ಬಿಚ್ಚುವರು. ಹೀಗೆ ಗುಸು ಗುಸು ನಡೆದಿದ್ದಾಗಲೇ ಗಂಡಂದಿರ ಆಗಮನವಾಗಿಬಿಟ್ಟರೆ ಅಲ್ಲೇ ಗಪ್ಪಾಗಿ ಬೇರೆ ಮಾತು ತೆಗೆಯುವರು.

 

ಏರಿದಾಗ ಒಮ್ದು ರೀತಿ, ಇಳಿದಾಗ ಇನ್ನೊಂದು ರೀತಿ ಎನ್ನುವಂತಿದ್ದ ದತ್ತೂಮಾಮ ಒಮ್ಮೆ ತನ್ನ ಫೈನಾನ್ಸ್ ಆಫೀಸಿನ ಎದುರು ತಲೆ ಹಣಕಿ ಹಾದು ಹೋಗುತ್ತಿರುವ ಅಕ್ಕ ಹಾಗು ಭಾವನನ್ನು ಇದ್ದಕ್ಕಿದ್ದಂತೆ ಎದ್ದು ನಿಂತು ಒಳ ಕರೆದು ಚಹ ತರಿಸಿ ವಿಳಾಸ ಬರಕೊಂಡು ಮನೆ ಬದಲಿಸಿದರೆ ಛೊಲೋ ಇತ್ತು ಎಂಬ ಸಲಹೆಯನ್ನೂ ಸಹ ಕೊಟ್ಟು ಕಳಿಸಿಬಿಟ್ಟಿದ್ದ. ಹೇಗಿದ್ದಾನೊ ಹುಡುಗಾ? ಅಂತ ಗುಟ್ಟಾಗಿ ಕೇಳಿದ ಅಮ್ಮನಿಗೆ ನಿನ್ನ ಮಗಳಿಗಿಂಗ ಛಂದ ಇದ್ದಾನೆ ಎಂದು ದುಮುಗುಟ್ಟಿದ ಮಾಮಾ. ನೀನು ಅವನನ್ನು ಮೊದಲು ಕಂಡಿದ್ದೆಯೋ? ಅಂತ ಸಹಜ ಕೇಳಿದರೂ ಅಂದರೆ? ನಾವು ಗೊತ್ತಿದ್ದೇ ಓಡಿಸಿದೆವು ಅಂತ ನಿನ್ನ ಮಾತಿನರ್ಥವೋ? ಎಂದು ಝಾಡಿಸಿಬಿಟ್ಟಿದ್ದ. ಅಂದಿನಿಂದ ಅಮ್ಮ ತನ್ನ ತಮ್ಮನ ಹತ್ತಿರ ಅತಿ ಕಡಿಮೆ ಮಾತಾಡುತ್ತಾಳೆ.

 

ಸಂದೀಪನಿಗೆ ಬಾಯಿ ತೆರೆಯದೇ ಎಲ್ಲ ವೇದ್ಯವಾಗಿತ್ತು. ರಜೆಗೆ ಊರಿಗೆ ಬಂದಾಗೆಲ್ಲ ಗಲೀಜಾದ ತನ್ನ ಡ್ರೆಸ್ಸನ್ನೆಲ್ಲ ತೊಳೆದು ಇಸ್ತ್ರೀ ಮಾಡುವ ಅಕ್ಕ, ನೀನು ಓದಿಕೋ ಎಂದು ಸಾವಿರ ಸಲ ಹೇಳುತ್ತ ಕೂತಲ್ಲೇ ಚಹ ಮಾಡಿ ತಂದು ಕೊಡುವ ಅಕ್ಕ, ತಾನು ಕೇಳಿದ ಎಲ್ಲ ಇಂಗ್ಲೀಷ್ ಪದಗಳನ್ನು ಸ್ಟ್ಯಾಂಡರ್ಡ್ ಡಿಕ್ಶನರಿ ನೋಡಿ ಅರ್ಥ ಹುಡುಕಿ ಒಂದೆಡೆ ಬರೆದಿಡುವ ಅಕ್ಕ, ತಲೆ ನೋವೆಂದರೆ ಸಾಕು ಮಲಗಿದ್ದಲ್ಲಿಯೇ ಬಂದು ಅಮೃತಾಂಜನ ಹಚ್ಚುವ ಅಕ್ಕ, ಚೂರೇ ಚಳಿ ಜ್ವರದ ರಾತ್ರಿಯಲ್ಲೂ ಆಗಾಗ ಎದ್ದು ಹಣೆ ಮುಟ್ತಿ ನೋಡಿ ತನ್ನ ಚಾದರವನ್ನೂ ನನಗೇ ಹೊದ್ದಿಸುವ ಅಕ್ಕ, ಅಮ್ಮನೊ ಮಾಸ್ತರಿಣಿಯೊ ಗೆಳತಿಯೊ ಒಮ್ಮೊಮ್ಮೆ ಎಲ್ಲವೂ ಅನ್ನಿಸಿಬಿಡುತ್ತಿದ್ದವು. ಭಾವನ ಹೆಸರು ಸತೀಶ ಎಂದು ತಿಳಿದಾಗ ಆ ಹೆಸರಿನ ಎಲ್ಲರನ್ನೂ ಪ್ರೀತಿಯಿಂದ ನೋಡುತ್ತ ಕಣ್ತುಂಬಿಸಿಕೊಳ್ಳತೊಡಗಿದ್ದ ಸಂದೀಪ.

 

***

ಅಷ್ಟರಲ್ಲಿಯೇ ಸ್ಟೇಷನ್ನಿನಲ್ಲಿ ಕೂಡಿಸಿ ಹೋದ ಪೇದೆ ಒಳಗೋಡಿ ಬಂದು ಸಂದೀಪನ ತೊಡೆಯ ಮೇಲಿರುವ ಪ್ಲಾಸ್ಟಿಕ್ ಬ್ಯಾಗನ್ನು ಲಾಟಿಯಿಂದಲೇ ಕುಟ್ಟಿ ಏನಿದೆ ಅದರಲ್ಲಿ? ಎಂದು ಜೋರು ಬಾಯಲ್ಲಿ ಕೇಳಿ ಆ ನಿನ್ನ ಚೀಟಿ ತೆಗಿ ಎಂದು ಧಮಕಿ ಹಾಕುತ್ತಿರುವಾಗಲೇ ಸಂದೀಪ ತ...ತ...ತ...ತ... ಅನ್ನತೊಡಗಿದ. ಮತ್ತೆ ಹೊರಗೆಂಥದೋ ದೊಡ್ಡ ಗದ್ದಲ ಕೇಳಿ ಅಷ್ಟಕ್ಕೇ ಬಿಟ್ಟ ಪೊಲೀಸು ಹೊರ ಓಡಿದ್ದ. ಈ ತ್ರಿಶಂಕು ಸ್ಥಿತಿಯಲ್ಲಿ ತನ್ನ ದಾರಿ ಯಾವ ದಿಕ್ಕಿಗೆ ಹೋಗಿ ಮುಟ್ಟುತ್ತದೋ ಎಂದು ಕನವರಿಸುತ್ತ ಕೂತೇ ಉಳಿದ ಸಂದೀಪ.

 

***

ಅತ್ತ ಕಮರೀಪೇಟೆಯಲ್ಲಿ ಸಾರಾಚಾಚಿಯ ಜತೆ ಬೆಳಿಗ್ಗೆಯೇ ಎದ್ದು ಚೆಕಪ್ಪಿಗಾಗಿ ಕಿಮ್ಸಿಗೆ ಹೋಗಿ ಬಂದು, ತನ್ನ ಪುಟ್ಟ ಮನೆಯ ಬಚ್ಚಲ ಖೋಲಿಯ ಕತ್ತಲಲ್ಲಿ ಕುಕ್ಕುರುಗಾಲಲ್ಲಿ ಕೂತು, ದಾವಣಿ ಇಲ್ಲದ ಸಣ್ಣ ಹೂವಿನ ಚೂಡೀ ತೊಟ್ಟು, ಸಬೀನಾ ಪೌಡರ್ ಉಜ್ಜಿ ಮಸಿಯಾದ ಭಾಂಡಿ ತೊಳೆಯುತ್ತಾ ಕೂತಿದ್ದ ಜಾನ್ಹವಿಗೆ ತಮ್ಮನ ಈ ಅವಸ್ಥೆ ತಿಳಿಯುವ ಹಾಗಿರಲಿಲ್ಲ. ಆದರೆ ಸ್ವಲ್ಪ ಹೊತ್ತಿನಲ್ಲೇ ಬಂದ ಪುಷ್ಪಾಮಾಮಿಯ ಫೋನಿನಿಂದ ಖುಷಿಗೆ ಮಾತೇ ಮರೆತವಳಂತೆ ನಿಂತು, ಚಾಚೀ ಕೊಟ್ಟ ಕೇಸರಿ ಹಾಕಿದ ಆಡಿನ ಹಾಲನ್ನು ಧಾವಂತದಿಂದ ಕುಡಿದಳು.

 

ಸಣ್ಣವನಿದ್ದಾಗ ದಿನವೂ ರಾತ್ರಿ ನಾಳೆ ಬೆಳಿಗ್ಗೆ ತಿನ್ನಲಿಕ್ಕೇನಮ್ಮಾ? ಎಂದು ಕೇಳಿ ಅಮ್ಮನ ಹತ್ತಿರ ಬೈಸಿಕೊಂಡೇ ಮಲಗುವ ಚಾಳಿಯಿಟ್ಟುಕೊಂಡಿದ್ದ ಈ ಮುದ್ದು ತಮ್ಮ, ತನ್ನ ಮನೆಯ ದಾರಿ ಹುಡುಕಿ ಬರಲಿರುವ ಸೂಚನೆ ಎಷ್ಟೋ ದಿನಗಳ ಹಿಂದೆ ಕನಸಿನಲ್ಲೇ ದೊರೆತಿದ್ದವಳಂತೆ ಅಚ್ಚರಿಗೊಳ್ಳದೇ ಕಾಯ್ದಳು.

 

***

ಸ್ಟೇಷನ್ನಿನ ಕಿಟಕಿಯಿಂದಲೇ ಚೂರು ಚೂರೇ ಹೊರ ಕಾಣುತ್ತಿದ್ದ ಈದ್ಗಾ ಮೈದಾನಿನಲ್ಲಿ ನಮಾಜಿಗೆ ಕೂತವರ ಬಿಳೀ ಕಸೂತಿಯ ಸುಂದರ ಟೊಪ್ಪಿಗೆಗಳು ಸಮುದ್ರ ದಂಡೆಗೆ ಕೂತ ಬೆಳ್ಳಕ್ಕಿ ಹಿಂಡುಗಳಂತೆ ಸಂದೀಪನನ್ನು ಸೆಳೆಯಿತು. ಲಾ ಇಲಾಹಿ ಇಲ್ಲೊಲ್ಲಾ ಎನ್ನುತ್ತ ಆರಂಭಗೊಂಡ ಕಲೇಮಾ ಎಲ್ಲರ ಲಕ್ಷ್ಯವನ್ನೂ ಮೈದಾನದತ್ತ ಆಕರ್ಷಿಸಿದಾಗ ತಾನೂ ನಿಧಾನ ಎದ್ದು ಹೊರ ಬಂದ. ಎಂದೂ ನೋಡದ ಅಷ್ಟು ದೊಡ್ಡ ಸಂಖ್ಯೆಯ ನಮಾಜು ಪ್ರಾರ್ಥನೆಯನ್ನು ಬೆರಗಾಗಿ ನಿಂತು ನೋಡಿದ.

 

ಅವನಿಗೆ ಇದ್ದಕ್ಕಿದ್ದಂತೆ ಮೂತ್ರ ಮಾಡಲು ಹೋಗಬೇಕೂ ಅನ್ನಿಸಿ ಅಲ್ಲೆಲ್ಲಾದರೂ ಅಂಥ ಜಾಗವಿದೆಯೇ ಎಂದು ನಿಂತಲ್ಲೇ ಹುಡುಕಾಡಿದ. ಆ ಕ್ಷಣ ಮೈಯಲ್ಲಿ ದೆವ್ವ ಹೊಕ್ಕವನಂತೆ ಹಗೂರ ಕಾಲಿನಿಂದ ನುಣುಚಿಕೊಂಡು ಗೇಟು ದಾಟಿ ಓಡುತ್ತ ರಸ್ತೆಗಿಳಿದವನೇ ಎದುರಿನ ಜನತಾ ಬಝಾರಿನ ಸಂದಿಯಲ್ಲಿ ಸೇರಿಕೊಂಡುಬಿಟ್ಟ. ಬಝಾರಿನ ಕಂಪೌಂಡಿನುದ್ದಕ್ಕೂ ಇರುವ ಉಪೇಂದ್ರನ ಹೊಸ ಸಿನೆಮಾದ ಭಯಾನಕ ಪೋಸ್ಟರು ಬೆಚ್ಚಿ ಬೀಳಿಸುವಂತಿತ್ತು. ಅವನ ಕಾಲು ಅವನಿಗೇ ತಡವಲಾರಂಭಿಸಿತ್ತು. ಒಮ್ದೊಂದೇ ಅಪರಿಚಿತ ಅಂಗಡಿಗಳ ದಾಟುತ್ತ ನಡೆದ. ಅವನಿಗೀಗ ತಾನು ಮೂತ್ರ ಮಾಡಬೇಕಿತ್ತೆನ್ನುವುದೇ ಮರೆತಿತ್ತು.

 

ಸ್ಟೇಷನ್ನಿನಲ್ಲಿ ತಂದು ಕೂಡಿಸಿ ಹೋದ ಪೇದೆಯೇ ಸಂದೀಪ ಓಡಿ ಹೋಗಿದ್ದನ್ನು ಬಹುದೂರದಿಂದ ಗಮನಿಸಿಬಿಟ್ಟದ್ದೇ ಒಂದು ದೊಡ್ಡ ಹಗರಣದ ರೂಪ ತಾಳತೊಡಗಿತ್ತು. ಈಗ ಅಲ್ಲಾಹು ಅಕ್ಬರ್ ಕೊನೆಯ ಹಂತದಲ್ಲಿ ನಡೆಯುತ್ತಿದ್ದುದರಿಂದ ಚದುರಿ ಹೋಗಿದ್ದ ಪೊಲೀಸರೆಲ್ಲ ಗುಂಪುಗೂಡಿ ಜಾಗ್ರತರಾಗಿಬಿಟ್ಟರು. ಚರ್ಚು ಮಸೀದಿ ದೇವಸ್ಥಾನಗಳ ಕಾವಲು ಕಾಯ್ದು ಬೇಸತ್ತ ಅವರ ಬುದ್ದಿ ಎಲ್ಲೆಲ್ಲೊ ಓಡಿತು. ಈಗ ಸಂದೀಪನ ಪ್ಲಾಸ್ಟಿಕ್ಕಿನಲ್ಲಿರುವ ವಸ್ತು, ಒಂದು ಬಾಂಬಿನ ಆಕಾರ ತಾಳಿ ಸಿಡಿಯಲಾರಂಭಿಸಿತ್ತು. ಇಂಥ ಸಂಶಯದ ಕಿಡಿ ಹೊತ್ತಿಕೊಳ್ಳುತ್ತಿರುವಂತೆಯೇ ಹುಬ್ಬಳ್ಳಿ ಶಹರವೇ ತನ್ನ ಎಂದಿನ ಬಂದ್ ಗಾಗಿ ಕಾತರಗೊಂಡಂತೆ ನಿಂತಿತು. ತಪ್ಪಿಸಿಕೊಂಡು ಓಡಿದ ಸಂದೀಪ ಒಂದು ಅನಾಹುತಕಾರಿ ಗ್ಯಾಂಗಿನ ಆತ್ಮಹತ್ಯಾ ದಳದ ಹುಡುಗನಾದ. ಈಗ ಅವನ ಚಹರೆ, ಪ್ಯಾಂಟು- ಶರ್ಟಿನ ಬಣ್ಣ, ಕೈಯ್ಯಲ್ಲಿ ಹಿಡಿದಿದ್ದ ಪ್ಲಾಸ್ಟಿಕ್ಕಿನ ವಿನ್ಯಾಸ ಏನೆಲ್ಲವೂ ವೈರ್ಲೆಸ್ ತುಂಬ ಮೆರೆದಾಡಿದವು. ಹುಡುಗನನ್ನು ಓಡಲು ಬಿಟ್ತಿದ್ದಕ್ಕಾಗಿ ಪಾಪದ ಆ ಪೊಲೀಸು ಅಮಾನತ್ತಿನಲ್ಲುಳಿದ.  ಅಂದು ಆ ಸ್ಟೇಷನ್ನಿನಲ್ಲಿ ಡ್ಯೂಟಿಗಿದ್ದ ಪೇದೆಗಳ ಪಡೆ, ತಮ್ಮ ದಪ್ಪ ಮೀಸೆಯ ಮೇಲಾಧಿಕಾರಿಗಳಿಂದ ಬೆಲ್ಟು ನೀವಿಕೊಳ್ಳುತ್ತ ನಿಂತು ಬೈಸಿಕೊಂಡರು.

 

ಸಂದೀಪ ಜನತಾ ಬಝಾರ ಸುತ್ತುವರೆದು ದಾಜಿಬಾನಪೇಟೆ ರಸ್ತೆಯ ಪ್ರವೇಶ ದ್ವಾರದಿಂದ ಹೊರ ಬಂದು ಮತ್ತೆ ಚೆನ್ನಮ್ಮಾ ಸರ್ಕಲ್ ಇದಿರಿಗೇ ಬಂದು ಸೇರಿದ. ಹಸ್ತದೊಳಗಿನ ವೈರ್ಲೆಸ್ಗಳನ್ನು ಕಿವಿಗೊತ್ತಿಕೊಂಡೇ ದೂರದಲ್ಲಿ ಓಡಾಡುತ್ತಿರುವ ಪೊಲೀಸರು ಸಂದೀಪನಿಗೆ ವಿಲಕ್ಷಣ ಭಯ ಹುಟ್ಟಿಸಲಾರಂಭಿಸಿದರು.

 

***

ಇತ್ತ ಜಾನ್ಹವಿಗೆ ಈಗ ತಾನಿದ್ದ ವಾತಾವರಣವೆಲ್ಲ ತೀರ ಹೊಸದಾಗಿ ಕಾಣತೊಡಗಿತ್ತು. ಮನೆ ಮುಂದಿನ ರಸ್ತೆಗಟಾರವನ್ನು ಕ್ಲೀನು ಮಾಡಲು ಬಂದ ಮಹಾನಗರ ಪಾಲಿಕೆ ಆಳುಗಳಿಗೆ ಕುಡಿಯಲು ನೀರು ಕೊಟ್ಟು ಬಂದ ಸತೀಶ ಮಹದೇವ ಜವಳಿ ಗಿರಣಿ ಸ್ಟ್ರೈಕಿನಿಂದ ಬಾಗಿಲು ಮುಚ್ಚಿದ ನಂತರ ಸಲೀಮ್ ಆಟೋಸ್ನಲ್ಲಿ ಕೆಲಸಕ್ಕೆ ಹೋಗುತ್ತಿದ್ದ. ಸಂದೀಪ ಬರುತ್ತಿರುವ ಸುದ್ದಿ ಕೇಳಿ ಪರಮಾಶ್ಚರ್ಯದಿಂದ ಹಾಗಾದ್ರೆ ಅಡಿಗೆಗೇನು ಮಾಡ್ತಿ? ಎಂದು ಕಸಿವಿಸಿಗೊಂಡ. ದಿನಾಲೂ ಪಟ-ಪಟ ಸಪ್ಪಳದಲ್ಲೇ ಗೋಲವಾಗುತ್ತ ಹೋಗುವ ಚಾಚಿಯ ಜೋಳದ ರೊಟ್ಟಿಕೆಂಡದೊಲೆಯಲ್ಲಿ ಬುರು ಬುರು ಉಬ್ಬುವ ಜಾದೂ ನೋಡುತ್ತ ಕೂಡುವ ಜಾನ್ಹವಿ, ಇಂದು ಎರಡು ಮೂರು ಸಾರಿ ಬಂದ ಪುಷ್ಪಾಮಾಮಿಯ ಫೋನಿಗೆ  ಇನ್ನೂ ಬಂದು ಮುಟ್ಟಲಿಲ್ಲಾ ಅನ್ನುತ್ತಾ ಗಾಬರಿಗೊಂಡು ಬಾಗಿಲಲ್ಲೇ ನಿಂತುಳಿದಳು.

 

ಮೀಸೆ ಚಿಗುರಿದ ನಿನ್ನ ತಮ್ಮನೇನು ಸಣ್ಣ ಮಗುವೇ? ಎಂಚ ಚಾಚಿ ಆಡಿನ ಹಿಕ್ಕೆಗಳನ್ನು ಜಾನ್ಹವಿ ನೆಟ್ಟುಕೊಂಡ ಗುಲಾಬಿ ಗಿಡಕ್ಕೆ ತಂದು ಹಾಕುತ್ತ ನಯವಾಗಿ ಗದರಿದಳು.

 

ಚಾಚಿಯೇ ಕೊಟ್ಟ, ಮನೆಯಲ್ಲೇ ಮಾಡಿದ ಶ್ಯಾವಿಗೆಯನ್ನು ತಮ್ಮನಿಗೆ ಇಷ್ಟವಾಗುವಂತೆ ಸ್ವಲ್ಪ ಹೆಚ್ಚೇ ಸಿಹಿ ಹಾಕಿ ಮಾಡಿದ ಖೀರಿಗೆ ಯಾಲಕ್ಕೀ ಪುಡಿ ಬೆರೆಸುತ್ತಿದ್ದಾಗ ಸತೀಶ ಎದುರಿಗಿದ್ದ ಮಂಜೀರನ ಅಂಗಡಿಯಿಂದ ಟೊಮೆಟೊ-ಆಲೂ ತರಲು ಹೊರಟ.

 

ಮೂವತ್ಮೂರರ ತನಕ ಸರಕಾರಿ ನೌಕರಿಗಾಗಿ ಕಾದು ನಂತರ ಮನೆಯೆದುರೇ ತರಕಾರಿ ಅಂಗಡಿ ಇಟ್ಟುಕೊಂಡಿದ್ದ ಮಂಜೀರ ಮುಂಜಾನೆಯೇ ಕಣ್ಣು ಕುಕ್ಕುವ ಬಿಳಿಯ ವಸ್ತ್ರ ಧರಿಸಿ ಈದ್ಗಾ ಮೈದಾನಿನ ವಿಶೇಷ ನಮಾಜಿಗೆ ಹೊರಟು ಹೋದದ್ದರಿಂದ ಮಂಜೀರನ ಹೆಂಡತಿ ನಫೀಸಾಗೆ ತರಕಾರಿ ರೇಟು ಗೊತ್ತಾಗಲೇ ಇಲ್ಲ. ಅವರು ಬಂದ ನಂತರ ಕೊಡಿ ಎಂದು ಬೂರ್ಖಾದಲ್ಲಿಯೇ ಹೇಳಿದಳು.

 

ಟೊಮೆಟೊ ಕುಯ್ಯುತ್ತ ತಮ್ಮನ ಧ್ಯಾನದಲ್ಲೇ ಕೂತ ಜಾನ್ಹವಿ ಈಳಿಗೆಗೆ ಬೆರಳು ತಾಗಿಸಿಕೊಂಡು ಪುಟ್ಟ ಗಾಯವಾಗಿ ಚಿಮ್ಮುತ್ತಿರುವ ನೆತ್ತರಿಗೆ ಆತಂಕಗೊಂಡ ಸತೀಶ ಮತ್ತೆ ಮಂಜೀರನ ಅಂಗಡಿಗೆ ಓಡಿ ಜಾನ್ಸನ್ ಬ್ಯಾಂಡೇಜು ತಂದು ಅವಳ ಬೆರಳಿಗೆ ಸುತ್ತಿದ. ಅಡುಗೆ ಮುಗಿದಾಗ ಒಟ್ಟಾದ ಮೂರ್ನಾಲ್ಕು ಪಾತ್ರೆಗಳನ್ನು ಸತೀಸ ತಾನೇ ತೊಳೆದ. ಆಗ ಅವನ ಹೊಟ್ಟೆಯ ಬಳಿ ನೆಂದ ಬಿಳಿ ಬನಿಯನ್ನು ಜಾನ್ಹವಿಗೆ ಅಕ್ಕರೆ ಹುಟ್ಟಿಸಿತು.

 

ಬ್ಯಾಂಡೇಜಿನ ಬೆರಳಲ್ಲೇ, ಸತೀಶ ಬೈದರೂ ಕೇಳದೇ ಜಾನ್ಹವಿ ಚಚ್ಚೌಕ ಕಪ್ಪು-ಬಿಳಿ ಕಲ್ಲು ಜೋಡಿಸಿದ ನೆಲವನ್ನು ತನ್ಮಯದಿಂದ ಗುಡಿಸಿ ವರೆಸಿದಳು.

 

***

ಹುಬ್ಬಳ್ಳಿಯ ಎಲ್ಲ ಪ್ರಾರ್ಥನಾ ಮಂದಿರಗಳಿಗೂ ಪೊಲೀಸು ಕಾವಲು ಹಾಕಿದ್ದರಿಂದ ರಸ್ತೆಗಳಲ್ಲಿ ಅವರ ಸಂಖ್ಯೆ  ವಿರಳವಾಗಿತ್ತು. ಚೆನ್ನಮ್ಮಾ ಸರ್ಕಲ್ ತುಂಬ ನಮಾಜು ಮುಗಿಸಿದ ಮಂದಿ ತಮ್ಮ ತಮ್ಮ ಮನೆಗೆ ತೆರಳುವ ಗಡಿಬಿಡಿಯಲ್ಲಿದ್ದರು. ಸಾರ್ವಜನಿಕರು ಸಹಕರಿಸಬೇಕು ಎಂಬ ಜಾಹೀರು ಪೊಲೀಸು ವ್ಯಾನಿನ ಮೈಕಿನಲ್ಲಿ ಬಿತ್ತರಗೊಳ್ಳತೊಡಗಿತ್ತು. ಸಂದೀಪ ಇನ್ನೆಂಥದೂ ವಿವರ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ.

 

ಪೇದೆಗಳೆಲ್ಲ ತಮ್ಮ ತಮ್ಮ ಹೆಂಡತಿಯರಿಗೆ ಸ್ಟೇಷನ್ನಿನಿಂದಲೇ ಫೋನು ಮಾಡಿ ಹುಬ್ಬಳ್ಳಿ ಬಂದಾಗುವ ಸಾಧ್ಯತೆ ಕಾಣ್ತಿದೆ, ನನಗೆ ಲೇಟಾಗಬಹುದು, ಜ್ವರದ ಮಗಳಿಗೆ ಉಣ್ಣಿಸಿ ಗುಳಿಗೆ ಕೊಟ್ಟು ಮಲಗಿಸು ಅಂತೆಲ್ಲ ಸಂದೇಶ ಮುಟ್ಟಿಸಿ ಬೀದಿ ಬದಿಯ ಬೇಲ್ಪುರಿ ಅಂಗಡಿಯಲ್ಲಿ ಬ್ರೆಡ್ ಬಾಜಿ ತಿಂದು ನಂತರ ಅವೇ ಅಂಗಡಿಗಳನ್ನು ಮುಚ್ಚಿಸಿದರು.

***

ನಮಾಜು ಮುಗಿಸಿದ ಕಮರೀಪೇಟೆಯ ಮಂಜೀರ, ಸಂದಣಿಯಿಂದ ಹೊರ ಬಂದು ಮನೇ ಹತ್ತಿರ ತೆರೆದಿಟ್ಟೇ ಬಂದ ಅಂಗಡಿಯಲ್ಲಿ ವ್ಯಾಪಾರ ಮಾಡುವ ಅವಸರದಲ್ಲಿ ತನ್ನ ಟಿವಿಎಸ್ ಮೇಲೆ ಕೂತು, ಅದೇ ಚೆನ್ನಮ್ಮಾ ವೃತ್ತದ ಕೆಂಪು ಸಿಗ್ನಲ್ ಬಳಿ ಕಾಯುತ್ತಿದ್ದ. ಆಗಲೇ ಆಕಸ್ಮಿಕವೋ ಕಾಕತಾಳೀಯವೋ ಅಥವಾ ಸಿನೆಮಾಗಳಲ್ಲಿ ನಡೆಯುವಂತೆಯೊ, ಅಲ್ಲೇ ಧುತ್ತನೆ ಎದುರುಗೊಂಡ ಸಂದೀಪ. ಅಕ್ಕನ ಮನೆಯ ವಿಳಾಸದ ಕಾಗದವನ್ನು ಪ್ಯಾಂಟಿನ ಕಿಸೆಯಿಮ್ದ ಹಗೂರ ಹೊರ ತೆಗೆದು ಮಂಜೀರನಿಗೇ ತೋರಿಸಿಬಿಟ್ಟಿದ್ದ.

ಇವನನ್ನೇ ಮೇಲಿಂದ ಕೆಳಗೆ ನೋಡುತ್ತ ಅಚ್ಚರಿಯಿಂದ ನಸು ನಕ್ಕ ಮಂಜೀರ, ನಾನೂ ಅಲ್ಲೇ ಹೊರಟದ್ದು, ನೀವು ಸತೀಶನವರ ಸಂಬಂಧವೊ ಅಥವಾ ಅವರ ಮನೆಯವರದೊ ಎಂದೆಲ್ಲ ಕೇಳುತ್ತಲೇ ಹಸಿರು ಸಿಗ್ನಲ್ ಬಂದಾಕ್ಷಣ ಟಿವಿಎಸ್ ಚಾಲೂ ಮಾಡಿ ಹಿಂದೆ ಕೂಡಿ ಎಂದು ಸನ್ನೆ ಮಾಡಿದ. ಸಂದೀಪನಿಗೆ ಒಮ್ಮೆಲೇ ನಿರಾಳವಾದಂತಾದರೂ ಗಾಡಿ ಏರಿದ ನಂತರದಲ್ಲಿ ಯಾರು ಏನು ಮತ್ತೆ ಒಂದೂ ಗೊತ್ತಿಲ್ಲದೇ ಯಾರನ್ನೋ ನಂಬಿ ಮಳ್ಳನಂತೆ ಗಾಡಿ ಹತ್ತಿಬಿಟ್ಟೆನಲ್ಲಾ ಎಂದು ಭಯವಾಗತೊಡಗಿತ್ತು. ಎಂದೂ ನೋಡದ ಹೊಸ ಹೊಸ ಬೀದಿಗಳು ವಿಚಿತ್ರ ತಲ್ಲಣ ತರುತ್ತಿತ್ತು. ರಸ್ತೆಯ ತಿರುವುಗಳಲ್ಲಿ ಸಿಗುವ ಪುಟ್ಟಪುಟ್ಟ ದರ್ಗಾ-ದೇವಸ್ಥಾನಗಳ ಗೋಪುರಗಳಲ್ಲಿ ಪಟಪಟಿಸುವ ಪಾರಿವಾಳಗಳನ್ನೇ ಒಂದು ಕ್ಷಣ ನಿಟ್ತಿಸಿ, ಮುಂದಿಟ್ಟುಕೊಂಡ ಪ್ಲಾಸ್ಟಿಕ್ ಚೀಲವನ್ನು ಗಟ್ಟಿಯಾಗಿ ಅದುಮಿ ಹಿಡಿದು ಕೂತ. ಎಷ್ಟೆಲ್ಲ ಅಡ್ಡರಸ್ತೆಗಳೇ ಎದುರಾದವು.

 

ನನ್ನ ಐದು ವರ್ಷದ ಬೇಟಿ ರಜಿಯಾ ನಿಮ್ಮ ಅಕ್ಕನನ್ನು ತುಂಬ ಹಚ್ಚಿಕೊಂಡಿದ್ದಾಳೆ. ಬೆಳಿಗ್ಗೆ ನಾನು ನಮಾಜಿಗೆ ಬರುವಾಗ ಇಬ್ಬರೂ ಹೊರಗೆ ಕಟ್ಟೆಯಲ್ಲಿ ಕೂತು ನೇಲ್ಪಾಲೀಶ್ ಹಚ್ಚಿಕೊಳ್ಳುತ್ತಿದ್ದರು ಎಂದು ಖುಷಿಯಿಂದ ಹೇಳಲಾರಂಭಿಸಿದ್ದ ಮಂಜೀರನಲ್ಲಿ ವಿಶ್ವಾಸ ತಾಳಿದ ಸಂದೀಪ ಧೈರ್ಯದಿಂದ, ಮುಂಜಾನೆಯಿಂದ ನಡೆದ ಪ್ರಮಾದವನ್ನೆಲ್ಲ ಗಾಡಿ ಚಲಿಸುತ್ತಿರುವಾಗಲೇ ಅವನ ಕಿವಿಯಲ್ಲಿ ಉಸುರಿ ಹಗುರಾದ.

 

ಹುಬ್ಬಳ್ಳಿಯಲ್ಲಿ ಮಾಮೂಲಿದು ಎಂದು ಮಂಜೀರ ಬಾಯಲ್ಲಿ ಹೇಳುತ್ತಿದ್ದರೂ ಈಗ ಗಲಿಬಿಲಿಗೊಳ್ಳುವ ಸರದಿ ಅವನದಾಗಿತ್ತು. ಯಾಕೆಂದರೆ ಆತನಿಗೆ ನಮಾಜು ಮುಗಿಯುತ್ತಿದ್ದಂತೆಯೇ ಸಂದೀಪನನ್ನೇ ಹೋಲುವ ವ್ಯಕ್ತಿಯ ಜಾಹಿರಾತು ಮೈಕಿನಲ್ಲಿ ಆಲಿಸಿದ್ದು ನೆನಪಾಗಿ ಬಿಟ್ಟಿತು. ಪ್ಲಾಸ್ಟಿಕ್ ಬ್ಯಾಗಿನಲ್ಲಿ ಎಂಥದೋ ಮುಕ್ಕೀಲ್ ಉಂಟು ಎನ್ನಿಸತೊಡಗಿದಂತೆ ಗಾಡಿ ನಿಲ್ಲಿಸಿ ಕೇಳಲೂ ದ್ವಂದ್ವವಾಗಿ ಜೀವ ಭಯದಿಂದ ಒಳಗೆಲ್ಲೊ ನಡುಕ ಹತ್ತಿ ಇಂಡಿ ಪಂಪಿನ ವನ್ವೇ ಮಧ್ಯೆಯೇ ಹಾಯ್ದು ಒಳರಸ್ತೆಯಿಂದ ಎರಡೇ ನಿಮಿಷದಲ್ಲಿ ಮನೆಯ ಮುಂದೆಯೇ ಹೋಗಿ ನಿಲ್ಲಿಸಿಬಿಟ್ಟ.

 

***

ಬಾಗಿಲಲ್ಲೇ ಕಣ್ಣು ಬಾಯಿ ಬಿಟ್ಟು ಕಾಯುತ್ತ ನಿಂತ ಜಾನ್ಹವಿ, ಮಂಜೀರನ ಗಾಡಿಯ ಹಿಂದಿನಿಂದ ಇಳಿಯುತ್ತಿದ ಈ ಉತ್ಸವ ಮೂರ್ತಿಯನ್ನು ಕಂಡವಳೇ ಪುರದ ಪುಣ್ಯವೇ ಬಂದಂತೆ ಸಂಭ್ರಮಿಸಿ ಓಡಿ ಬಂದದ್ದು ನೋಡಿ ಮಂಜೀರನಿಗೆ ಹೋದ ಜೀವ ಮರಳಿ ಬಂತು. ಇದು ಬಾಂಬ್ ಕೇಸಲ್ಲ ಎಂದು ವಿಶ್ವಾಸ ಹುಟ್ಟಿಸಿತು.

 

ಸಂದೀಪ ನೆಲಕ್ಕೆ ಹೆಜ್ಜೆಯೂರಿ ನಿಂತವನೇ ತುಸು ಕಂಪಿಸಿದ. ಒಂದೆರೆಡು ಪುಟ್ಟ ಮೊಡವೆ ಕಲೆಗಳ ಕೆನ್ನೆಯ ಅಕ್ಕ ಚೂರು ಸೊರಗಿದಂತೆನಿಸಿದರೂ ಮೊದಲಿಗಿಂತ ಹೆಚ್ಚೇ ಸುಂದರವಾಗಿ ಕಂಡಳು. ಓಡೋಡಿ ಹತ್ತಿರ ಬಂದು ನಿಂತ ಅಕ್ಕನ ಕಣ್ಣುಗಳಲ್ಲಿ ಇಡೀ ಹುಬ್ಬಳ್ಳಿಯನ್ನೇ ತೊಳೆದು ಶುದ್ಧೀಕರಿಸುವ ದಳದಳ ನೀರಿತ್ತು.

 

ಬಾಗಿಲ ಮೆಟ್ಟಿಲ ಬಳಿ ನಿಂತಿದ್ದ ಸತೀಶ ಫಟ್ಟನೆ ಒಳ ಓಡಿ ಬನಿಯನ್ನಿನ ಮೇಲೆ ಷರ್ಟು ಹಾಕಿಕೊಳ್ಳುತ್ತ ಹೊರ ಬಂದ. ಚೂಪಾದ ಮೂಗಿನ ಈ ಸತೀಶ ಭಾವ ತುಸು ಸ್ವಾಭಿಮಾನಿಯಿರಬೇಕೆನ್ನಿಸಿದರೂ ಇಷ್ಟು ದಿನದ ತನ್ನ ಕಲ್ಪನೆಯ ವ್ಯಕ್ತಿಗಿಂತ ಒಂದು ಗುಂಜಿ ಹೆಚ್ಚೇ ಆಕರ್ಷಕವಾಗಿದ್ದಾನೆನ್ನಿಸಿತು, ಸಂದೀಪನಿಗೆ. ಸತೀಶನ ಸರಳ ವ್ಯಕ್ತಿತ್ವಕ್ಕೆ ಮೊದಲ ನೋಟದಲ್ಲೇ ಮರುಳಾದ ಸಂದೀಪ ನೀಲಿ ಬಣ್ಣ ಬಳಿದುಕೊಂಡ ಏಕಮಾತ್ರ ತಗಡಿನ ಖುರ್ಚಿಯ ಮೇಲೆ ತುಸುವೇ ಬಗ್ಗಿ ಕೂತ. ಹೇಗೆ ಯಾವ ಮಾತಿನಿಂದ ಶುರು ಮಾಡಬೇಕೆಂದು ತಿಳಿಯದೇ, ಹಕ್ಕಿಗಳು ತಮ್ಮ ರಾಗವನ್ನೇ ಮರೆತಂತೆ ಮೂವರೂ ಒದ್ದಾಡಿದರು.

 

ಅಕ್ಕನ ಬಳೆಗಳ ಕಿಂಕಿಣ ನಾದವನ್ನಷ್ಟೆ ಆಲಿಸುತ್ತ ಸಂದೀಪ ಸತೀಶ ಭಾವನ ಕಣ್ಣುಗಳಲ್ಲೇ ಏನನ್ನೊ ಹುಡುಕಲಾರಂಭಿಸಿದ. ಹೊರಗೆ ರಜಿಯಾ ಬೇಟಿ, ಅವಳ ಅಮ್ಮಿ ನಫೀಸಾ ಹತ್ತಿರ ರಸ್ತೆಯಲ್ಲಿ ಹಾಯುವ ಫೆಮಿಲಾ ಐಸ್‌ಕ್ಯಾಂಡಿ ಕೊಡಿಸೆಂದು ರಾಗ ತೆಗೆದಿದ್ದಳು. ಅವಳ ಮುದ್ದು ಉರ್ದು ಕಲರವದ ಪಕ್ಕವಾದ್ಯದಲ್ಲಿ ಜಾನ್ಹವಿಯ ಚಹ ಸೀಮೆ ಎಣ್ಣೆಸ್ಟೋವಿನಲ್ಲಿ ಕುದಿಯಿತು. ಚಹದ ಕಪ್ಪು ಕೊಡುವಾಗ ಅಕ್ಕನ ಬೆರಳ ಬ್ಯಾಂಡೇಜನ್ನೇ ನಿರುಕಿಸಿದ ಸಂದೀಪ ಅಲ್ಲೇನಾಯ್ತು? ಎಂದು ಆಕಾಶದ ನಕ್ಷತ್ರವೊಂದು ಜಾರಿ ಬಿದ್ದಂತೆ ಮೊದಲ ಮಾತು ಆಡಿದ. ಆ ಚಿರಪರಿಚಿತ ದನಿ, ಅಮ್ಮನ ವಾತದ ಕಾಲುನೋವು, ಅಪ್ಪನ ಕಣ್ಣಿಗೆ ಬಂದಿರುವ ಮೋತಿಬಿಂದು ಎಲ್ಲವನ್ನೂ ಜತೆಯಲ್ಲೇ ತಂದಂತಿತ್ತು.

 

ತನ್ನ ಎಂದಿನದೇ ಶೈಲಿಯಲ್ಲಿ ಸಂದೀಪ ಬಿಸಿ-ಬಿಸಿ ಚಹ ಉಫ್-ಉಫ್ ಎಂದು ಊದಿಕೊಂಡು ಹೀರತೊಡಗಿದಾಗ ಜಾನ್ಹವಿ ಮೈಮರೆತು ನೋಡಿದಳು. ಗೋಡೆಯ ಬದಿಯಲ್ಲೇ ಸುತ್ತಿಟ್ಟ ಗಾದಿಯ ಮೇಲೆ ಬಂದು ಕೂತ ಸತೀಶನ ಸನ್ನಿಧಿಯಲ್ಲಿ ಸಂದೀಪ ಇಂಚಿಂಚೇ ಕರಗುತ್ತ ಬಾತ್‌ರೂಮು ಎಲ್ಲಿ? ಕೇಳಿದ. ಒಳಗೆ ಅಡುಗೆ ಖೋಲಿಯ ಪಕ್ಕದ ಸಣ್ಣ ಕತ್ತಲ ಬಚ್ಚಲು ಖೋಲಿ ತೋರಿಸಿ ಸತೀಶ ಹೊರಬಂದ.

 

ತನ್ನ ಟಿವಿ‌ಎಸ್ ಒಳಗಿಟ್ಟು ಬಂದು ನಿಂತ ಮಂಜೀರ, ಬಾಗಿಲಲ್ಲೇ ಹಣಕಿ ಸಂದೀಪನ ವೃತ್ತಾಂತವನ್ನೆಲ್ಲ ಚಾಚೂ ತಪ್ಪದೇ ವಿವರಿಸಿದಾಗ ಅಯ್ಯೋ ದೇವರೇ ಎನ್ನುತ್ತ ಜಾನ್ಹವಿ ಮಿಡಿದಳು. ಅವರ ನೀಲಿ ಷರ್ಟನ್ನು ಬದಲಿಸಿ ಮೊದಲು ಎಂದು ಎಚ್ಚರಿಸಿ ಹೋದ ಮಂಜೀರ. ಜಾನ್ಹವಿ ರೀಬಾಕ್ ಎಂದು ಎದೆಯ ಮೇಲೆ ಬರೆದುಕೊಂಡ ಸತೀಶನ ಬಿಳಿಯ ಟೀ ಶರ್ಟೊಂದನ್ನು ತಮ್ಮನಿಗೆ ತಂದು ಕೊಟ್ಟಳು.

 

ಅಷ್ಟರ ತನಕ ಮರೆತೇಹೋದ, ಗೋಡೆಯ ಬಳಿ ನೆಲಕ್ಕೆ ಅನಾಥವಾಗಿ ಇವರನ್ನೇ ಮಿಕಿಮಿಕಿ ನೋಡುತ್ತಿರುವಂತೆ ಕೂತ ಪ್ಲಾಸ್ಟಿಕ್ಕನ್ನು ಮೇಲೆತ್ತಿದ ಸಂದೀಪ. ಅಲ್ಲಿಂದಿಲ್ಲಿಯವರೆಗೂ ಪ್ರಾಣದಂತೆ ಕಾಯ್ದುಕೊಂಡು ಬಂದ ಅಮ್ಮ ಕಳಿಸಿದ ಮಿಡಿಗಾಯಿ ಉಪ್ಪಿನಕಾಯಿ ಬಾಟಲಿಯನ್ನು ಹೊರ ತೆಗೆದು ಅಕ್ಕನ ಮುಂದೆ ನಸುನಗುತ್ತ ಹಿಡಿದ. ಜಾನ್ಝವಿ ಆಗಷ್ಟೇ ಹುಟ್ಟಿದ ಕೂಸನ್ನು ಎತ್ತಿಕೊಳ್ಳುವಂತೆ ಮೃದುವಾಗಿ ಎರಡೂ ಕೈಯಲ್ಲಿ ಅಪ್ಪಿಕೊಂಡಳು.

 

ತಮ್ಮ ತೆಗೆದುಕೊಟ್ಟ ನೀಲಿ ಶರ್ಟನ್ನು ಹೆಗಲ ಮೇಲೆ ಹಾಕಿಕೊಂಡೇ ಕೈಯಲ್ಲಿಯ ಉಪ್ಪಿನಕಾಯಿ ಬಾಟಲಿಯ ಮುಚ್ಚಳ ತಿರುಗಿಸುತ್ತಲೇ ಜಾನ್ಹವಿ, ಸಾರಾ ಚಾಚಿಯ ಮನೆಗೋಡಿ ತನ್ನ ತಮ್ಮ ಬಂದು ಮುಟ್ಟಿದ ವಿಷಯ ತಿಳಿಸಿ ಬಂದಳು. ಸಾರಾ ಚಾಚಿ ನಿಧಾನ ಓಡಾಡು, ನಿಧಾನ ಎನ್ನುತ್ತ ನಕ್ಕರು.

 

ಉಪ್ಪಿನಕಾಯಿ ಬಾಟಲಿಯ ಮುಚ್ಚಳ ತೆಗೆಯಲು ಬಾರದೇ ಜಾನ್ಹವಿ ತಲೆಯ ಮೇಲೆ ಕೈ ಹೊತ್ತು ಕೂತಳು. ಸತೀಶನೊಂದು ಬಾರಿ ಸಂದೀಪನೊಂದು ಸಾರಿ ತಮ್ಮತಮ್ಮ ಪೌರುಷ ಬಳಸಿ ಬಾಟಲ್ಲು ಸ್ಫೋಟಿಸದಂತೆ ಅರ್ಧ ಘಂಟೆ ಹೋರಾಡಿ ಮುಚ್ಚಳ ತೆಗೆಯಲು ಯಶಸ್ವಿಯಾದರು. ತಕ್ಷಣ ಮನೆಯನ್ನೆಲ್ಲ ಆವರಿಸಿ ನಿಂತ ಮತ್ತೇರಿಸುವ ಉಪ್ಪಿನಕಾಯಿಯ ಕಂಪಿನಲ್ಲಿ, ಕಡಲ ತೀರದ ಒದ್ದೆ ರೇವೆಯೊಳಗೆ ಜಾನ್ಹವಿಯ ಪುಟ್ಟ ಹೆಜ್ಜೆ ಗುರುತುಗಳು ಕಟ್ಟಿದ ಸಹಸ್ರಾರು ಗುಬ್ಬಿಗೂಡುಗಳಿದ್ದವು.

 

                                                                                                                       ವಿಜಯ ಕರ್ನಾಟಕ-ಅಂಕಿತ ಪುಸ್ತಕ

                                                                                                                       ಯುಗಾದಿ ಕಥಾಸ್ಪರ್ಧೆ (೨೦೦೪)